ವಿಜಯಪುರ:ಮನೆಯಲ್ಲಿ ಅಜ್ಜ ತೀರಿಕೊಂಡಿದ್ದರೂ ಕೂಡ ಅಂತಿಮ ದರ್ಶನಕ್ಕೆ ತೆರಳದೇ ಪ್ರವಾಹ ಸಂತ್ರಸ್ತರ ನೆರವಿಗೆ ನಿಲ್ಲುವ ಮೂಲಕ ವಿಜಯಪುರ ಜಿಲ್ಲಾಧಿಕಾರಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ನದಿ ಪ್ರವಾಹ ಹಿನ್ನೆಲೆ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡುವುದು ಸೇರಿದಂತೆ ಇತರ ಪರಿಹಾರ ಕಾರ್ಯ ನಡೆದಿತ್ತು. ಖುದ್ದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರೇ ಒಂದು ವಾರದಿಂದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ವೇಳೆ ಅವರ ಅಜ್ಜ ನಿಧನರಾದರೂ ಕೂಡ ಅಂತ್ಯಕ್ರಿಯೆಗೂ ಕೂಡ ತೆರಳಿಲ್ಲ.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಕರ್ತವ್ಯ ನಿಷ್ಠೆ ಕಳೆದೊಂದು ವಾರದಿಂದ ಕಚೇರಿಯಲ್ಲಿ ಕೂಡದೇ ಪ್ರವಾಹಪೀಡಿತ ಗ್ರಾಮಗಳಿಗೆ ಸಂಚಾರ ಮಾಡಿದ್ದಾರೆ. ನೆರೆ ಸಂತ್ರಸ್ತರ ಸಂಕಷ್ಟ, ದುಃಖಕ್ಕೆ ಜಿಲ್ಲಾಧಿಕಾರಿ ನೆರವಾಗಿದ್ದಾರೆ. ಶುಕ್ರವಾರ ಡಿಸಿಯವರ ಅಜ್ಜ ಎಂ.ಹೆಚ್. ನಾಯ್ಕರ ನಿಧನರಾಗಿದ್ದರು. ಬಾಲ್ಯದಿಂದ ಸಾಕಿ ಸಲುಹಿದ್ದ ಅಜ್ಜನ ಅಂತ್ಯಕ್ರಿಯೆಗೂ ತೆರಳದೆ ಶೋಕದಲ್ಲೂ ಪ್ರವಾಹ ಹಿನ್ನೆಲೆ ಕರ್ತವ್ಯ ನಿರ್ವಹಿಸಿದ್ದಾರೆ.
ಅಲ್ಲದೆ ವಿಜಯಪುರ ಜಿಲ್ಲೆಯ ಯಾವುದೇ ಅಧಿಕಾರಿಗಳಿಗೂ ರಜೆ ನೀಡದೇ ಸ್ವತಃ ಮುಂದೆ ನಿಂತು ಕೆಲಸ ಮಾಡಿದ ಡಿಸಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ 2009ರಲ್ಲೂ ಸಾರವಾಡ ಗ್ರಾಮದ ಡೋಣಿ ನದಿ ಪ್ರವಾಹದ ಸಂದರ್ಭದಲ್ಲಿಯೂ ಮಹಾಪೂರದಲ್ಲಿ ಈಜಿ, ಇದ್ದಿಲು ಭಟ್ಟಿ ಕಾರ್ಮಿಕರನ್ನು ಇದೇ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ರಕ್ಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.