ವಿಜಯಪುರ: ಜಿಲ್ಲೆಯ ಪ್ರಮುಖ ಬೆಳೆಯಾದ ಬಿಳಿಜೋಳ ಹಾಗೂ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ಒಣದ್ರಾಕ್ಷಿ ಹಾಗೂ ಲಿಂಬೆ ಬೆಳೆಗೆ ಸೂಕ್ತ ಮಾರುಕಟ್ಟೆ, ಮಾರುಕಟ್ಟೆ ಸಂಪರ್ಕ ಒದಗಿಸುವ ಜೊತೆಗೆ ಆಹಾರ ಸಂಸ್ಕರಣೆಗೆ ಅನುಕೂಲವಾಗುವ ಯೋಜನಾ ವರದಿಯೊಂದನ್ನು ಸಿದ್ದಪಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕೌಶಲ್ಯ ಮಿಷನ್ ಸಮನ್ವಯ ಸಮಿತಿ ಸಭೆ ನಡೆಸಿದ ಅವರು ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಯೋಜನೆಯಡಿ ವಿಜಯಪುರ ಜಿಲ್ಲೆಯಲ್ಲಿ ಸಂಭಾವ್ಯ ಕ್ಷೇತ್ರಗಳ ಕುರಿತು ಸಮಗ್ರ ಸಮೀಕ್ಷೆ ನಡೆಸಲಾಗಿದ್ದು, ಜಿಲ್ಲೆಯ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಸೂಕ್ತ ಉತ್ತೇಜನ ನೀಡುವುದು ಅವಶ್ಯಕವಾಗಿದೆ ಎಂದರು.
ಮಹಾರಾಷ್ಟ್ರ ರಾಜ್ಯದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಉತ್ತೆಜನ ನೀಡಲು ಮಹಾಗ್ರೇಪ್ಸ್ ಎಂಬ ಸಂಸ್ಥೆಯಡಿ ಸೂಕ್ತಬೆಲೆ, ಮಾರುಕಟ್ಟೆ ವ್ಯವಸ್ಥೆ, ಸಂಪರ್ಕ ಕಲ್ಪಿಸಲಾಗಿದೆ. ಅದರಂತೆ ವಿಜಯಪುರ ಜಿಲ್ಲೆಯ ಹಲವು ಬೆಳೆಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಲೆ ಮತ್ತು ಮಹತ್ವ ದೊರಕಿಸಲು ಸೂಕ್ತ ಹಾಗೂ ಯೋಜನಾ ಬದ್ಧವಾಗಿ ಕಾರ್ಯ ನಿರ್ವಹಿಸಬೇಕಿದೆ. ವಿಶೇಷವಾಗಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಮತ್ತು ರೈತ ಉತ್ಪಾದಕರ ಸಂಘಗಳ ಮಧ್ಯೆ ಸಮನ್ವಯ ವ್ಯವಸ್ಥೆಯೊಂದು ಜಾರಿಗೊಳ್ಳುವ ಅಗತ್ಯವಿದೆ. ಇದರಿಂದ ರೈತರ ಸ್ಥಿತಿ ಸುಧಾರಣೆ, ಸುಶಿಕ್ಷಿತರ ಉದ್ಯೋಗಕ್ಕೂ ನೆರವಾಗಲಿದ್ದು, ಕೃಷಿ, ತೊಟಗಾರಿಕೆ ಇಲಾಖೆಗಳು ಈ ದಿಸೆಯಲ್ಲಿ ಹೆಚ್ಚು ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.