ವಿಜಯಪುರ :ಮಾರ್ಚ್ 09 ರಿಂದ ಮಾರ್ಚ್ 29ರ ವರೆಗೆ ಜಿಲ್ಲೆಯ 56 ಪರೀಕ್ಷಾ ಕೇಂದ್ರಗಳಲ್ಲಿದ್ವಿತಿಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳು ವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅವರಿಂದು ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದರು.
ಈ ಸಭೆಯ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಪರೀಕ್ಷೆಗೆ ಒಟ್ಟು 32,268 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 30,178 ಅಭ್ಯರ್ಥಿಗಳು ಪ್ರಸಕ್ತ ಸಾಲಿಗೆ ಹಾಗೂ 1,140 ಅಭ್ಯರ್ಥಿಗಳು ಪುನರಾವರ್ತಿತ ಅಭ್ಯರ್ಥಿಗಳಿದ್ದಾರೆ. ಜಿಲ್ಲೆಯಲ್ಲಿ 6 ಸರಕಾರಿ ಪರೀಕ್ಷಾ ಕೇಂದ್ರಗಳು, 32 ಖಾಸಗಿ ಅನುದಾನಿತ, 18 ಖಾಸಗಿ ಅನುದಾನರಹಿತ ಪರೀಕ್ಷಾ ಕೇಂದ್ರಗಳೂ ಸೇರಿದಂತೆ ಒಟ್ಟು 56 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರದೇಶದಲ್ಲಿ 34 ಹಾಗೂ ಗ್ರಾಮೀಣ ಪ್ರದೇಶದಲ್ಲಿ 22 ಪರೀಕ್ಷಾ ಕೇಂದ್ರಗಳಿವೆ. ಕಳೆದ ಸಾಲಿಗೆ ಹೋಲಿಸಿದಲ್ಲಿ ಈ ಬಾರಿ 3 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕಾವಾರು ಪರೀಕ್ಷಾ ಕೇಂದ್ರಗಳು:ಆಲಮೇಲ ತಾಲೂಕಿನಲ್ಲಿ -02, ಬಬಲೇಶ್ವರ-01, ಬಸವನ ಬಾಗೇವಾಡಿ-04, ಚಡಚಣ-02, ದೇವರಹಿಪ್ಪರಗಿ-02, ಇಂಡಿ-07, ಕೊಲ್ಹಾರ-01, ಮುದ್ದೇಬಿಹಾಳ-05, ನಿಡಗುಂದಿ-02, ಸಿಂದಗಿ-05, ತಾಳಿಕೋಟೆ-05, ತಿಕೋಟಾ-02, ವಿಜಯಪುರ ನಗರ-15 ಹಾಗೂ ಗ್ರಾಮೀಣ-03 ಪರೀಕ್ಷಾ ಕೇಂದ್ರಗಳಿವೆ.
ಮುಂಜಾಗ್ರತಾ ಕ್ರಮಕ್ಕೆ ಡಿಸಿ ಸೂಚನೆ:ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಕುಡಿಯುವ ನೀರು, ವಿದ್ಯುತ್ ಸೌಕರ್ಯ, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳ ಕುರಿತು ಮುಂಚಿತವಾಗಿ ಪರಿಶೀಲನೆ ಮಾಡಬೇಕು. ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.