ವಿಜಯಪುರ:ಜಿಲ್ಲೆಯಲ್ಲಿ ಅನಧಿಕೃತವಾಗಿ ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆಯಲ್ಲಿ ತೊಡಗುವ ಆಸ್ಪತ್ರೆಗಳ ಬಗ್ಗೆ ತೀವ್ರ ನಿಗಾ ಇಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಪರಿಶೀಲನಾ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿ ಅನಧಿಕೃತವಾಗಿ ಭ್ರೂಣ ಲಿಂಗ ಪತ್ತೆ ಹಾಗೂ ಶಿಶು ಹತ್ಯೆಯಲ್ಲಿ ತೊಡಗಿರುವ ಆಸ್ಪತ್ರೆಗಳ ವಿರುದ್ಧ ತೀವ್ರ ನಿಗಾ ಇಡಬೇಕು. ಅಲ್ಟಾಸೋನೋಗ್ರಾಫಿ ಯಂತ್ರ ದುರ್ಬಳಕೆ ಯಾಗದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸುವಂತೆಯೂ ತಾಕೀತು ಮಾಡಿದ್ದಾರೆ.
ಭ್ರೂಣ ಲಿಂಗ ಪತ್ತೆ: ಅಧಿಕಾರಿಗಳೊಂದಿಗೆ ವಿಜಯಪುರ ಡಿಸಿ ಸಭೆ ವೈದ್ಯರಿಂದ ಹೊಸದಾಗಿ ಸೋನೋಗ್ರಾಫಿ ಯಂತ್ರ ಬಳಕೆಗೆ ಸಂಬಂಧಿಸಿದಂತೆ ಎನ್‌ಒಸಿ ನೀಡುವ ಮುಂಚೆ ಕಡ್ಡಾಯವಾಗಿ ಕಾನೂನಿನ ಎಲ್ಲ ಮಾನದಂಡಗಳನ್ನು ಪೂರೈಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಅದರಂತೆ ಅನುಮತಿ ಪಡೆದ ಯಂತ್ರ ಮತ್ತು ನಿಗದಿತ ವೈದ್ಯರೇ ಯಂತ್ರ ಬಳಸುತ್ತಿರುವ ಬಗ್ಗೆ ಕಾಲಕಾಲಕ್ಕೆ ಪರಿಶೀಲಿಸಲು ಅವರು ಸೂಚನೆ ನೀಡಿದರು.
ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಅನಿರೀಕ್ಷಿತ ವಾಗಿ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ ಪರಿಶೀಲನಾ ವರದಿ ಸಲ್ಲಿಸಬೇಕು. ಸರ್ಕಾರದ ನಿರ್ದೇಶನಗಳನ್ನು ಮತ್ತು ಆರೋಗ್ಯ ಸಂಬಂಧಿತ ನಿಯಮಗಳನ್ನು ಪಾಲಿಸದೆ ಅನೈತಿಕವಾಗಿ ಗರ್ಭಪಾತದಲ್ಲಿ ತೊಡಗಿರುವ ಆಸ್ಪತ್ರೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದರು.
ಜಿಲ್ಲೆಯಲ್ಲಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾನೂನಿನ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ದೂರು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು. ತಜ್ಞ ವೈದ್ಯರ ಸಲಹೆಯಿಲ್ಲದೆ ಅನಧಿಕೃತವಾಗಿ ಗರ್ಭಪಾತ ಮಾತ್ರೆಗಳ ಮಾರಾಟದ ಬಗ್ಗೆ ತೀವ್ರ ನಿಗಾ ಮತ್ತು ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜದ ಹಿತದೃಷ್ಟಿಯಿಂದ ಜಿಲ್ಲಾ ಸಲಹಾ ಸಮಿತಿ ಸದಸ್ಯರು ಮತ್ತು ಜಿಲ್ಲಾ ತಪಾಸಣಾ ಹಾಗೂ ಪರಿಶೀಲನಾ ಸಮಿತಿ ಸದಸ್ಯರು ವಾಸ್ತವಾಂಶ, ಸಮಸ್ಯೆಗಳನ್ನು ತಿಳಿಸುವ ಜೊತೆಗೆ ಸಮಾಜದಲ್ಲಿ ವಿಶ್ವಾಸ ಮೂಡಿಸುವಂತಹ ದಿಸೆಯಲ್ಲಿ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಹೆಣ್ಣು-ಗಂಡು ನಡುವಿನ ಲಿಂಗಾನುಪಾತ ಸರಿಪಡಿಸುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅಧಿಕಾರಿ ಮತ್ತು ಸದಸ್ಯರಿಗೆ ಸಲಹೆ ನೀಡಿದರು.