ವಿಜಯಪುರ:ಮುಂಬರುವ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಜಾಗೃತಿಯಿಂದ ಹಾಗೂ ಸರ್ಕಾರದ ಪರಿಷ್ಕತ ಮಾರ್ಗಸೂಚಿಗಳನ್ವಯ ಆಚರಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಸಾರ್ವಜನಿಕರು, ಶ್ರೀ ಗಣೇಶ ಉತ್ಸವ ಮಂಡಳಿಗಳು ಮತ್ತು ಮುಸ್ಲಿಂ ಬಾಂಧವರಿಗೆ ಮನವಿ ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗಣೇಶ ಹಬ್ಬ ಆಚರಣೆ ಮತ್ತು ಮೊಹರಂ ಹಬ್ಬದ ಆಚರಣೆ ಕುರಿತಂತೆ ನಡೆದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಇದೇ ಆಗಸ್ಟ್ 22 ರಿಂದ ಆಚರಿಸಲಾಗುವ ಗಣೇಶ ಹಬ್ಬ ಮತ್ತು ಆಗಸ್ಟ್ 30 ರಂದು ಆಚರಿಸಲಾಗುವ ಮೊಹರಂ ಹಬ್ಬಗಳನ್ನು ಸರಳವಾಗಿ, ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸುವಂತೆ ಸಲಹೆ ನೀಡಿದ್ದಾರೆ.
ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಗಣೇಶ ಮಂಡಳಿಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿ ಮತ್ತು ಎನ್ಒಸಿ ಪಡೆಯಬೇಕು. ಅನುಮತಿಗೆ ಈ ಬಾರಿ ಯಾವುದೇ ಶುಲ್ಕ ಪಡೆಯುವದಿಲ್ಲ. ಆದರೆ ಗಣೇಶ ವಿಸರ್ಜನೆ ದಿನಗಳಾದ ಒಂದನೇ ದಿನಕ್ಕೆ 200 ರೂ., ಐದನೇ ದಿನಕ್ಕೆ 760 ರೂ, ಏಳನೇ ದಿನಕ್ಕೆ 1,040 ರೂ, ಒಂಭತ್ತನೆ ದಿನಕ್ಕೆ 1,320 ರೂ. ಹಾಗೂ ಹನ್ನೊಂದನೇ ದಿನಕ್ಕೆ 1,600 ರೂ.ಗಳನ್ನು ಗಣೇಶ ವಿಸರ್ಜಿಸುವಂತಹ ಮಂಡಳಿಗಳು ವಿದ್ಯುತ್ ಬಿಲ್ ಚಲನ್ಗಳನ್ನು ತಕ್ಷಣ ಭರಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಗಣೇಶ ಮಂಡಳಿಗಳು ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸಬೇಕು. ಪೆಂಡಾಲ್ದಲ್ಲಿ ಕಡ್ಡಾಯವಾಗಿ 24*7 ಕಾರ್ಯಕರ್ತರು ಇರುವಂತೆ ನೋಡಿಕೊಳ್ಳಬೇಕು. ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಸೂಕ್ತ ಸ್ಯಾನಿಟೈಜರ್ ಮತ್ತು ಸ್ಯಾನಿಟೈಜೇಶನ್ ವ್ಯವಸ್ಥೆಯೊಂದಿಗೆ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಬೇಕು. ಗಣೇಶ ಮಂಡಳಿಗಳ ಕಾರ್ಯಕರ್ತರ ಮಾಹಿತಿಯನ್ನು ಗಣೇಶ ವಿಸರ್ಜನೆ ದಿನ ನಮೂದಿಸಿ ನೀಡಬೇಕು. ಸರ್ಕಾರದ ನಿರ್ದೇಶನದಂತೆ ಅಷ್ಟೇ ಗಾತ್ರದ ಗಣೇಶ ಪ್ರತಿಷ್ಠಾಪಿಸಬೇಕು.