ವಿಜಯಪುರ:ಮತ ಚಲಾಯಿಸಲು ಗುಲಬುರ್ಗಾದಿಂದ ತಡವಾಗಿ ಬಂದಿದ್ದ ದಂಪತಿ ಓಡೋಡಿ ಬಂದು ಮತಚಲಾಯಿಸಿದ ಘಟನೆ ವಿಜಯಪುರ ನಗರದ ದರ್ಬಾರ್ ಹೈಸ್ಕೂಲ್ ಮತದಾನ ಕೇಂದ್ರದಲ್ಲಿ ನಡೆದಿದೆ.
ಗುಲಬುರ್ಗಾ ವಿಂಡ್ ಫ್ಯಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವಿರೇಶ ದಂಪತಿಗೆ ಇಂದು ಬೆಳಗ್ಗೆ ಮೀಟಿಂಗ್ ಇರುವ ಕಾರಣ ಬೇಗ ಬಿಡುವುದು ಆಗಿಲ್ಲ. ನಂತರ ಮತದಾನ ಮಾಡಲೇಬೇಕು ಎಂದು ಗುಲಬುರ್ಗಾದಿಂದ ಬಸ್ ಮೂಲಕ ವಿಜಯಪುರಕ್ಕೆ ಹೊರಟಿದ್ದಾರೆ.
ಆದರೆ ಮಧ್ಯೆ ಟ್ರಾಫಿಕ್ ಜಾಮ್ ಆಗಿದ್ದರಿಂದ ವಿಜಯಪುರ ತಲುಪುವದು ತಡವಾಗಿದೆ. ತಕ್ಷಣ ಬಸ್ ನಿಲ್ದಾಣದಿಂದ ಸ್ನೇಹಿತನೊಬ್ಬನ ಬೈಕ್ ತೆಗೆದುಕೊಂಡು ನೇರ ದರ್ಬಾರ್ ಶಾಲೆಯ ಮತಗಟ್ಟೆ 162ಗೆ ಬಂದು, ನೇರವಾಗಿ ದಂಪತಿ ಓಡೋಡಿ ಹೋಗಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ದಂಪತಿ ಮತ್ತೆ ಬೈಕ್ ಹತ್ತಿ ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ.
ನವದಂಪತಿ ಮತದಾನ:ಜಿಲ್ಲೆಯ ತಾಳಿಕೋಟಿ ಪಟ್ಟಣದ ಮತಗಟ್ಟೆ ಸಂಖ್ಯೆ-21ರಲ್ಲಿ ಇಂದು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ ನೂತನ ನವ ವಧು-ವರ ಜೋಡಿ ತಮ್ಮ ಹಕ್ಕು ಚಲಾಯಿಸಿದರು. ಬಿರಾದಾರ ಕುಟುಂಬ ಪಟ್ಟಣದ ಶ್ರೀ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ಮದುವೆ ಮುಗಿದ ನಂತರ ವಧು ರಕ್ಷಿತಾ ಅವರು ತಮ್ಮ ಪತಿ ಶರಣಬಸವ ಅವರ ಜತೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.