ವಿಜಯಪುರ: ವಿಜಯಪುರ ವಿಮಾನ ನಿಲ್ದಾಣ ಹಾಗೂ ರೇವಣ ಸಿದ್ದೇಶ್ವರ ಏತನೀರಾವರಿ ಯೋಜನೆಯ ಅಡಿಗಲ್ಲು ಕಾರ್ಯಕ್ರಮ ಫೆಬ್ರವರಿ ಮೂರನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ನಗರದ ಹೊರ ವಲಯದ ಬುರಣಾಪುರ- ಮದಭಾವಿ ಗ್ರಾಮದ ಮಧ್ಯೆ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ವಿಮಾನ ನಿಲ್ದಾಣದ ಕಾಮಗಾರಿ ಶೇ 75ರಷ್ಟು ಪೂರ್ಣಗೊಂಡಿದೆ. ಫೆಬ್ರವರಿ 15-20ರೊಳಗಾಗಿ ಕಾಮಗಾರಿ ಪೂರ್ಣ ಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸಭೆ ನಡೆಸಿ ಸೂಚಿಸಲಾಗಿದೆ. ಫೆ.20ರ ನಂತರ ವಿಮಾನ ನಿಲ್ದಾಣ ಪ್ರಧಾನಿ ಮೋದಿಯವರಿಂದ ಲೋಕಾರ್ಪಣೆಗೊಳ್ಳಲಿದೆ. ಇದರೊಂದಿಗೆ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಅಡಿಗಲ್ಲು ನಡೆಯಲಿದೆ ಎಂದು ತಿಳಿಸಿದರು.
ಇಂಡಿಯಾ ವಿಮಾನ ಪ್ರಾಧಿಕಾರ:ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಇದೇ ತಿಂಗಳು ನಡೆಯಬಹುದು. ಅದು ತಡವಾದರೆ ವಿಜಯಪುರ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣ ಒಂದೇ ದಿನ ಉದ್ಘಾಟನೆಯಾಗಬಹುದು. ವಿಮಾನ ನಿಲ್ದಾಣ ಮೇಲುಸ್ತುವಾರಿ ನೋಡಿಕೊಳ್ಳುವದು ಸಿಬ್ಬಂದಿ ಭರ್ತಿ, ರನ್ ವೇ ಸುಧಾರಣೆ ಸೇರಿದಂತೆ ಕಟ್ಟಡ ನಿರ್ಮಾಣ ನಂತರ ನಡೆಯುವ ಪ್ರಕ್ರಿಯೆ ಸಂಬಂಧ ಎಲ್ಲ ಖಾಸಗಿ ಹಾಗೂ ಏರ್ ಇಂಡಿಯಾ ವಿಮಾನ ಪ್ರಾಧಿಕಾರದ ಮುಖ್ಯಸ್ಥರ ಜತೆ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಏರಲೈನ್ಸ್ ಕಂಪನಿಗಳ ಸುಪರ್ದಿಗೆ ವಿಮಾನ ನಿಲ್ದಾಣ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದರು.
ಬಸವೇಶ್ವರರ ಹೆಸರು ಅಂತಿಮ: ದಿ. ಸಿದ್ದೇಶ್ವರ ಸ್ವಾಮೀಜಿ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಹೆಸರಿಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕಾರಜೋಳ ಅವರು, ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರ ವಿಮಾನ ನಿಲ್ದಾಣಕ್ಕೆ ಶ್ರೀ ಬಸವೇಶ್ವರರ ಹೆಸರು ಇಡುವ ಕುರಿತು ಅನುಮೂದನೆಯಾಗಿದೆ. ಈಗ ಹೆಸರು ಬದಲಿಸುವುದು ಸರಿಯಲ್ಲ. ಈ ವಿಚಾರವಾಗಿ ರಾಜಕೀಯ ಮಾಡುವುದು ಬೇಡ ಎಂದು ಮನವಿ ಮಾಡಿದರು.