ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕರ್ನಾಟಕದ ಭೀಮಾ ನದಿ ಧುಮಿಕ್ಕಿ ಹರಿಯುತ್ತಿದೆ. ಸೊಲ್ಲಾಪುರ ಜಿಲ್ಲೆಯ ಉಜನಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಸೇರಿದಂತೆ ನಾನಾ ಬ್ಯಾರೇಜುಗಳು ಭೀಮಾ ನದಿ ಪ್ರವಾಹದಲ್ಲಿ ಮುಳುಗಡೆಯಾಗಿವೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯಗಳ ಗಡಿಯಲ್ಲಿ ಹರಿಯುವ ಭೀಮಾ ನದಿಗೆ ವಿಜಯಪುರ ಜಿಲ್ಲೆಯಲ್ಲಿ 8 ಕಡೆಗಳಲ್ಲಿ ಬ್ಯಾರೇಜ್ ನಿರ್ಮಿಸಲಾಗಿದೆ. ತಲಾ ನಾಲ್ಕು ಬ್ಯಾರೇಜ್ಗಳನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ನಿರ್ಮಿಸಿವೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದಸೂರ ಗ್ರಾಮದ ಮೂಲಕ ಭೀಮಾ ನದಿ ಕರ್ನಾಟಕವನ್ನು ಪ್ರವೇಶ ಮಾಡುತ್ತದೆ. ಈಗ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು, ವಿಜಯಪುರ ಜಿಲ್ಲಾಡಳಿತ ಪ್ರವಾಹ ಮುನ್ನೆಚ್ಚರಿಕೆ ನೀಡಿದೆ.
8 ಕಡೆಗಳಲ್ಲಿ ಬ್ಯಾರೇಜ್:ವಿಜಯಪುರ ಜಿಲ್ಲೆಯ ಚಡಚಣ ಮತ್ತು ಇಂಡಿ ತಾಲೂಕಿನ ನಾಲ್ಕು ಕಡೆಗಳಲ್ಲಿ ಒಟ್ಟು 8 ಕಡೆಗಳಲ್ಲಿ ಬ್ಯಾರೇಜ್ ನಿರ್ಮಿಸಲಾಗಿದೆ. ಗೋವಿಂದಪುರ-ಭಂಡಾರಕವಟೆ, ಉಮರಾಣಿ- ಲವಂಗಿ, ಔಜ-ಶಿರನಾಳ, ಚಿಂಚಪೂರ-ಧೂಳಖೇಡ, ಚಣೆಗಾಂವ-ಬರೂರ, ಹಿಂಗಣಿ-ಆಳಗಿ, ಖಾನಾಪುರ-ಪಡನೂರ, ಹಿಳ್ಳಿ-ಗುಬ್ಬೇವಾಡ ಬಳಿ ಈ ಬ್ಯಾರೇಜ್ ಗಳನ್ನು ನಿರ್ಮಿಸಲಾಗಿದೆ.