ವಿಜಯಪುರ: ನ್ಯಾಯಾಲಯದ ಮೆಟ್ಟಿಲೇರಿ ಸುಮಾರು ಮೂರು ವರ್ಷಗಳ ಕಾಲ ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯದೇ ಅಭಿವೃದ್ಧಿ ಕುಂಠಿತವಾಗಿದ್ದ 35 ವಾರ್ಡ್ಗಳಲ್ಲಿ ಈಗ ಚುನಾವಣೆ ಮುಗಿದರೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಮೇಯರ್ ಉಪ ಮೇಯರ್ ಚುನಾವಣೆ ನಡೆಸಲು ಜನಪ್ರತಿನಿಧಿಗಳು ತೋರುತ್ತಿರುವ ನಿರಾಸಕ್ತಿಯಿಂದ 35 ವಾರ್ಡ್ಗಳ ನೂತನ ಸದಸ್ಯರು ಅಧಿಕಾರವೇ ವಹಿಸಿಕೊಂಡಿಲ್ಲ. ಇದರ ಪರಿಣಾಮ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನ್ನಮ್ಮನವರ ಅವರೇ 10.97ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದ್ದಾರೆ.
ಮೇಯರ್ ಉಪ ಮೇಯರ್ ಸ್ಥಾನಕ್ಕೆ ಈಗಾಗಲೇ ಸರ್ಕಾರ ಮೀಸಲಾತಿ ಪ್ರಕಟಣೆ ಮಾಡಿದೆ. ಮೇಯರ್ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪ ಮೇಯರ್ ಸ್ಥಾನಕ್ಕೆ ಎಸ್ಟಿ ಪುರುಷರಿಗೆ ಮೀಸಲಾಗಿದೆ. ಇಷ್ಟಾದರೂ ಎರಡು ಸ್ಥಾನಕ್ಕೆ ಚುನಾವಣೆ ಮಾತ್ರ ನಡೆದಿಲ್ಲ. ಸದ್ಯ ಜಿಲ್ಲಾಡಳಿತ ಮಹಾನಗರ ಪಾಲಿಕೆಯು ಅಧಿಕಾರ ವಹಿಸಿಕೊಂಡಿದೆ. ನಿಯಮಾವಳಿಯಂತೆ ಮುಂದಿನ ಆಯವ್ಯಯಕ್ಕಾಗಿ ಸದ್ಯ ಉಳಿತಾಯ ಬಜೆಟ್ ಮಂಡಿಸಿ ಅದಕ್ಕೆ ಜಿಲ್ಲಾಧಿಕಾರಿ ಅನುಮೂದನೆ ಸಹ ನೀಡಿದ್ದಾರೆ.
2019ರಲ್ಲಿ ಚುನಾವಣೆ ನಡೆಯಬೇಕಾಗಿತ್ತು: ನಿಯಮಾವಳಿಯಂತೆ ಹಿಂದಿನ ಪಾಲಿಕೆ ಸದಸ್ಯರ ಅವಧಿ 2019ರಲ್ಲಿ ಮುಗಿದಿತ್ತು. ಆವಾಗಲೇ ಚುನಾವಣೆ ನಡೆಯಬೇಕಾಗಿತ್ತು. ಆದರೆ ಕೆಲ ಸದಸ್ಯರು ಮೀಸಲಾತಿ ವಿಚಾರವಾಗಿ ಕಲಬುರ್ಗಿ ಹೈಕೋರ್ಟ್ ಮೆಟ್ಟಿಲೇರಿದ ಪರಿಣಾಮ ಚುನಾವಣೆ ಮೂರು ವರ್ಷದ ನಂತರ 2022ರ ಅಕ್ಟೋಬರ್ನಲ್ಲಿ ನಡೆದು 35 ವಾರ್ಡ್ಗಳಿಗೆ ನೂತನ ಸದಸ್ಯರು ಆಯ್ಕೆಯಾಗಿದ್ದಾರೆ.
ಬಿಜೆಪಿಗೆ ಅಧಿಕಾರ:ಸದ್ಯ 35 ವಾರ್ಡ್ಗಳಲ್ಲಿ ಬಿಜೆಪಿ 17, ಕಾಂಗ್ರೆಸ್ 10, ಪಕ್ಷೇತರರು 5, ಜೆಡಿಎಸ್ 1, ಹಾಗೂ ಎಐಎಂಐಎಂ 2 ಸ್ಥಾನಗಳಿಸಿದ್ದು ಸದ್ಯ ಪಕ್ಷೇತರ ಓರ್ವ ಪಕ್ಷೇತರ ಸದಸ್ಯ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಇದರ ಜೊತೆಗೆ ನಗರ ಶಾಸಕ ಹಾಗೂ ಸಂಸದ ಬಿಜೆಪಿಯವರೇ ಇದ್ದಾರೆ. ಇವರ ಮತ ಸೇರಿ ಈ ಬಾರಿ ಪಾಲಿಕೆ ಅಧಿಕಾರದ ಗದ್ದುಗೆ ಹಿಡಿದಿದೆ.