ಕರ್ನಾಟಕ

karnataka

ETV Bharat / state

ಲಿಂಬೆ ಬೆಳೆಗಾರನ ಬದುಕಿಗೆ 'ಹುಳಿ' ಹಿಂಡಿದ ಕೋವಿಡ್‌ ಲಾಕ್‌ಡೌನ್‌ - Vijayapura Lockdown

ರಾಜ್ಯದಲ್ಲಿ ಅತೀ ಹೆಚ್ಚು ಲಿಂಬೆ ಬೆಳೆಯುವ ವಿಜಯಪುರ ಜಿಲ್ಲೆಯ ಬೆಳೆಗಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಲಾಕ್ ಡೌನ್​ ಕಾರಣ ಲಿಂಬೆ ಮಾರಾಟ ದರದಲ್ಲಿ ಭಾರೀ ಕುಸಿತವಾಗಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ.

Lemon growers problem
ಲಿಂಬೆ ಬೆಳೆಗಾರರ ಸಮಸ್ಯೆ

By

Published : May 31, 2021, 11:01 AM IST

ವಿಜಯಪುರ: ಕೋವಿಡ್ ಲಾಕ್‌ಡೌನ್​ನಿಂದ ಲಿಂಬೆ ಮಾರಾಟ ದರ ಕುಸಿದು ಜಿಲ್ಲೆಯ ಬೆಳೆಗಾರರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದಾರೆ.

ಹೊರ ರಾಜ್ಯಗಳಿಗೆ ಮಾರಾಟವಾಗದ ಲಿಂಬೆ:

ವಿಜಯಪುರ ಜಿಲ್ಲೆ ರಾಜ್ಯದಲ್ಲಿ ಅತೀ ಹೆಚ್ಚು ಲಿಂಬೆ ಬೆಳೆಯುವ ಪ್ರದೇಶವಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 12,500 ಹೆಕ್ಟರ್ ಪ್ರದೇಶದಲ್ಲಿ ಲಿಂಬೆ ಹಣ್ಣು ಬೆಳೆಯಲಾಗಿದೆ. ಪಂಜಾಬ್, ದೆಹಲಿ, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಿಗೆ ಜಿಲ್ಲೆಯ ಲಿಂಬೆ ಮಾರಾಟವಾಗುತ್ತದೆ. ಆದರೆ, ಈ ವರ್ಷ ಕೋವಿಡ್ ಲಾಕ್​ ಡೌನ್​ ಕಾರಣ ಹೊರ ರಾಜ್ಯಗಳಿಗೆ ಲಿಂಬೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಲಿಂಬೆ ಹಣ್ಣಿಗೆ ಬೆಲೆ ಕುಸಿದಿದೆ.

ಭಾರೀ ಬೆಲೆ ಕುಸಿತ:

ನಗರದ ಎಪಿಎಂಸಿಗೆ ಬೆಳೆಗಾರರು ನಿತ್ಯ ಲಿಂಬೆ ತರುತ್ತಿದ್ದಾರೆ. ಹೊರ ರಾಜ್ಯಗಳಿಗೆ ಮಾರಾಟವಾಗದ ಕಾರಣ ಮಧ್ಯವರ್ತಿಗಳು ಹರಾಜಿನಲ್ಲಿ ಕಡಿಮೆ ಬೆಲೆಗೆ ಲಿಂಬೆ ಖರೀದಿಸುತ್ತಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಲಿಂಬೆ ಬೆಳೆದಿರುವ ಬೆಳೆಗಾರರಿಗೆ ನಷ್ಟವಾಗುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಒಂದು ಡಾಗ್ (1 ಸಾವಿರ ಹಣ್ಣುಗಳಿರುವ ಚೀಲ) ಲಿಂಬೆಗೆ 2 ರಿಂದ 3 ಸಾವಿರ ರೂ. ಬೆಲೆ ಇತ್ತು. ಈಗ 600 ರಿಂದ 800 ರೂ.ಗೆ ಖರೀದಿಯಾಗುತ್ತಿದೆ.

ಬೆಲೆ ಕುಸಿತದಿಂದ ನಷ್ಟ ಅನುಭವಿಸುತ್ತಿರುವ ಲಿಂಬೆ ಬೆಳೆಗಾರರು

ನಿತ್ಯ ರಾತ್ರಿ ಹರಾಜು :

ಲಾಕ್ ಡೌನ್ ಕಾರಣ ನಿತ್ಯ ರಾತ್ರಿ ಎಪಿಎಂಸಿಯಲ್ಲಿ ಲಿಂಬೆ ಹರಾಜು ಪ್ರಕ್ರಿಯೆ ಮಾಡಲಾಗುತ್ತಿದೆ. ಬೆಳೆಗಾರರು ತಮ್ಮ ಗ್ರಾಮಗಳಿಂದ ಲಿಂಬೆ ತುಂಬಿಕೊಂಡು ರಾತ್ರಿ ಎಪಿಎಂಸಿಗೆ ಬರಬೇಕು. ಬೆಳಗ್ಗೆ 5 ಗಂಟೆಯೊಳಗೆ ಹರಾಜು ಮುಗಿಸಿ ಲಿಂಬೆ ಪ್ಯಾಕ್ ಮಾಡಿ ಲಾರಿಗೆ ತುಂಬಿಸಿ ಬೆಳಗ್ಗೆ 10 ಗಂಟೆಯೊಳಗೆ ಎಪಿಎಂಸಿಯಿಂದ ಹೊರಡಬೇಕು. ಈ ನಡುವೆ ದೂರದಿಂದ ಹೊತ್ತು ತಂದ ಲಿಂಬೆಗೆ ಸರಿಯಾದ ಬೆಲೆಯೂ ಸಿಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ರೈತರಿಗೆ ಸಮಸ್ಯೆಯಾಗುತ್ತಿದೆ.

ಹೆಸರಿಗಷ್ಟೇ ಲಿಂಬೆ ಅಭಿವೃದ್ದಿ ಮಂಡಳಿ :

ಜಿಲ್ಲೆಯಲ್ಲಿ ಸರ್ಕಾರ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪಿಸಿದೆ. ಆದರೆ, ಅದಕ್ಕೆ ಯಾವುದೇ ಅನುದಾನ ನೀಡದ ಕಾರಣ ಹೆಸರಿಗಷ್ಟೇ ಮಂಡಳಿ ಮತ್ತು ಅದಕ್ಕೊಂದು ಅಧ್ಯಕ್ಷರು ಇದ್ದಾರೆ. ಲಿಂಬೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಲಿಂಬೆ ಬೆಳೆಗಾರರು ಎರಡು ಬಾರಿ ಸಭೆ ನಡೆಸಿದ್ದಾರೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಹಲವು ವರ್ಗಗಳನ್ನು ಸೇರಿಸಿ ವಿಶೇಷ ಪ್ಯಾಕೇಜ್ ಘೋಷಿಸಿರುವ ಸರ್ಕಾರ, ಮತ್ತೊಂದು ಪ್ಯಾಕೇಜ್ ಘೋಷಣೆಗೆ ಅನಿಯಾಗಿದೆ. ಎರಡನೇ ವಿಶೇಷ ಪ್ಯಾಕೇಜ್​ನಲ್ಲಿ ಲಿಂಬೆ ಬೆಳಗಾರರನ್ನೂ ಸೇರಿಸಿಕೊಳ್ಳುವಂತೆ ಬೆಳೆಗಾರರು ಮನವಿ ಮಾಡಿದ್ದಾರೆ.

ಇದನ್ನೂಓದಿ : ನರೇಗಾ, ಹಣ್ಣುಗಳ ಮಾರಾಟ, ಸೆಕ್ಯೂರಿಟಿ ಗಾರ್ಡ್ ಕೆಲಸದ ಮೊರೆ ಹೋದ ಖಾಸಗಿ ಶಾಲಾ ಶಿಕ್ಷಕರು

ABOUT THE AUTHOR

...view details