ವಿಜಯಪುರ: ವಿದ್ಯುತ್ ಕೊರತೆ ನೀಗಿಸುವ ಸಲುವಾಗಿ ಉಷ್ಣ ವಿದ್ಯುತ್ ಸ್ಥಾವರಗಳನ್ನು ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಜಿಲ್ಲೆಯ ಎನ್ಟಿಪಿಸಿ (ಕೂಡಗಿ ವಿದ್ಯುತ್ ಸ್ಥಾವರ) ಕೂಡ ಒಂದು. ವಿಜಯಪುರದ ಹೆಮ್ಮೆಗೆ ಕಾರಣವಾಗಿದ್ದ ಎನ್ಟಿಪಿಸಿ ಇದೀಗ ರೈತರಿಗೆ ಕಂಟಕವಾಗಿದೆ.
ಎನ್ಟಿಪಿಸಿಯಲ್ಲಿ ನಿತ್ಯ 2,000 ರಿಂದ 2,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕೆ ತಗಲುವ ಕಲ್ಲಿದ್ದಲ್ಲನ್ನು ರೈಲು ಮೂಲಕ ತಂದು ಇಲ್ಲಿನ ಸ್ಥಾವರಗಳಲ್ಲಿ ಸುಟ್ಟು ಅದರ ಶಾಖದಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಕಲ್ಲಿದ್ದಲು ಸುಡುವ ಕಾರಣ ಹಾರುಬೂದಿಯನ್ನು ದೊಡ್ಡ ಸ್ಥಾವರಗಳ ಮೂಲಕ ಗಾಳಿಯಲ್ಲಿ ಬಿಡದೇ, ನೀರಲ್ಲಿ ಮಿಶ್ರಣ ಮಾಡಿ ಸ್ಥಾವರದಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿನ ಮಸೂತಿ ಗ್ರಾಮದ ಬಳಿ 1,400 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿರೋ ನಾಲ್ಕು ಕೆರೆಗಳಿಗೆ ಬಿಡಲಾಗುತ್ತಿದೆ. ಪರಿಣಾಮ ಸುತ್ತಮುತ್ತಲಿನ ಜಮೀನುಗಳು ಸತ್ವ ಕಳೆದುಕೊಳ್ಳುತ್ತಿದ್ದು, ಭೂಮಿ ಬಿಳಿ ಬಣ್ಣಕ್ಕೆ ತಿರುಗುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾರುಬೂದಿಯನ್ನು ನೀರಿನ ಮೂಲಕ ಕೆರೆಗಳಿಗೆ ಬಿಡಲಾಗುತ್ತಿದೆ. ಅಲ್ಲಿ ನೀರನ್ನು ಮತ್ತೆ ಫಿಲ್ಟರ್ ಮಾಡಿ, ಮರು ಬಳಕೆ ಮಾಡಲಾಗುತ್ತದೆ. ಹಾರುಬೂದಿ ಹೂಳಿನ ರೂಪದಲ್ಲಿ ಕೆರೆಯಲ್ಲಿ ಸಂಗ್ರಹವಾಗುತ್ತಿದ್ದು, ಇದನ್ನು ಸಿಮೆಂಟ್ ಪ್ಯಾಕ್ಟರಿಗೆ ಹಾಗೂ ಇಟ್ಟಿಗೆ ತಯಾರಿಕೆಗೆ ನೀಡಲಾಗುತ್ತಿದೆ. ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿಯನ್ನು ಹೊತ್ತು ತಂದ ನೀರು ಕೆರೆಗಳಲ್ಲಿ ಸಂಗ್ರಹವಾಗುತ್ತಿದ್ದು, ಅದೇ ನೀರು ಕೆರೆಗಳ ಕೆಳಗಿನ ಭಾಗದ ರೈತರ ಪಾಲಿಗೆ ವಿಷವಾಗಿ ಪರಿಣಮಿಸಿದೆ.
ಹೌದು, ಯಾವಾಗ ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿಯನ್ನು ಹೊತ್ತ ನೀರು ಮಸೂತಿ ಹಾಗೂ ಸುತ್ತಮುತ್ತಲ ಗ್ರಾಮಗಳ ಬಳಿ ನಿರ್ಮಾಣವಾಗಿರೋ ಕೆರೆಗಳಲ್ಲಿ ಸಂಗ್ರಹವಾಗಲು ಆರಂಭವಾಗಿದೆಯೋ ಅಲ್ಲಿಂದ ಕೆರೆಯ ಸುತ್ತಮುತ್ತಲ ಜಮೀನುಗಳಲ್ಲಿ ಸಮಸ್ಯೆ ಉಂಟಾಗಿತ್ತು. ಹಾರುಬೂದಿಯನ್ನು ಸಂಗ್ರಹಿಸಿದ್ದ ಕೆರೆಗಳ ನೀರು, ಕೆಳಭಾಗದಲ್ಲಿರೋ ಜಮೀನುಗಳಲ್ಲಿ ಮೇಲೇಳಲು ಆರಂಭಿಸಿತು. ಜೊತೆಗೆ ತೆರೆದ ಬಾವಿ, ಕೊಳವೆ ಬಾವಿಗಳ ಅಂತರ್ಜಲದಲ್ಲಿ ಸೇರಿಕೊಂಡಿದ್ದು, ಈ ಭಾಗದಲ್ಲಿನ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ, ಯಾವುದೇ ಬೆಳೆ ಬೆಳೆಯಲಾಗದೇ ಜವಳು ಹಿಡಿದು ಬಿಟ್ಟಿದೆ.
ಇದೇ ಜಮೀನನ್ನು ನಂಬಿ ಬದುಕುತ್ತಿದ್ದ ರೈತ ಕುಟುಂಬಗಳು ಇದೀಗ ಬೀದಿಗೆ ಬಿದ್ದಿವೆ. ಹಾರುಬೂದಿ ಸಂಗ್ರಹಿಸೋ ಕೆರೆಗಳಿಂದ ನಮಗೆ ಸಮಸ್ಯೆಯಾಗುತ್ತಿದೆ. ನಮ್ಮ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ ಬೆಳೆ ಬಾರದಂತಾಗಿದೆ ಎಂದು ರೈತರು ಹತ್ತಾರು ಬಾರಿ ಎನ್ಟಿಪಿಸಿ ಆಧಿಕಾರಿಗಳಿಗೆ ಮನವಿ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ ಜಮೀನಿನ ಮೇಲ್ಭಾಗದಲ್ಲಿ ಉಪ್ಪಿನಾಂಶ ಸಂಗ್ರಹವಾಗುತ್ತಾ ಹೋದ ಕಾರಣ, ಜಮೀನುಗಳು ಸವಳು ಜವಳಾಗಿದೆ.