ಕರ್ನಾಟಕ

karnataka

ETV Bharat / state

ಜನರ ಆರೋಗ್ಯ ರಕ್ಷಣೆಯಲ್ಲಿ ವಿಜಯಪುರ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಬೇಕು: ಎಂ.ಬಿ.ಪಾಟೀಲ - Vijayapur

ಸರಳ ಮತ್ತು ಸುಲಭವಾಗಿ ಮನೆ ಮನೆ ಆರೋಗ್ಯ ಸರ್ವೇ, ಅನಾರೋಗ್ಯ ವ್ಯಕ್ತಿಗಳ ಮಾಹಿತಿ, ಅಗತ್ಯವಿರುವವರಿಗೆ ಚಿಕಿತ್ಸೆ ಈ ಮೂರು ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಂಡು ಇಡೀ ರಾಜ್ಯಕ್ಕೆ ಮಾದರಿಯಾಗುವುದರೊಂದಿಗೆ ಜಿಲ್ಲೆಯ ಜನತೆಯ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಎಂ.ಬಿ.ಪಾಟೀಲ ಹೇಳಿದರು.

vijayapur
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೊರೊನಾ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿದ ಶಾಸಕ ಎಂ.ಬಿ.ಪಾಟೀಲ

By

Published : May 16, 2021, 9:04 AM IST

ವಿಜಯಪುರ: ಗ್ರಾಮೀಣ ಭಾಗದ ಜನರ ಮನೆ ಮನೆ ಸರ್ವೇ ಮಾಡಿ ಅನಾರೋಗ್ಯಕ್ಕೀಡಾದವರಿಗೆ ರೋಗ ಲಕ್ಷಣಗಳನುಸಾರ ಚಿಕಿತ್ಸೆ ನೀಡಲು ಪ್ರಾರಂಭಿಸಿದರೆ ಇಡೀ ರಾಜ್ಯದಲ್ಲಿಯೇ ನಮ್ಮ ವಿಜಯಪುರ ಜಿಲ್ಲೆ ಮಾದರಿಯಾಗುತ್ತದೆ ಎಂದು ಶಾಸಕ ಎಂ.ಬಿ.ಪಾಟೀಲ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಡಿಸಿ ಸುನೀಲ್​ ಕುಮಾರ್​ ಅವರಿಗೆ ಮನವಿ ಸಲ್ಲಿಸಿ ಕೊರೊನಾ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಮೊದಲ ಅಲೆಯಲ್ಲಿ ಅಷ್ಟಾಗಿ ಕಂಡು ಬರದ ಕೊರೊನಾ, 2ನೇ ಅಲೆಯಲ್ಲಿ ಹೆಚ್ಚಾಗಿ ಬಾಧಿಸುತ್ತಿದೆ. ಇದರಿಂದ ಗ್ರಾಮಗಳಲ್ಲಿ ಸರಣಿ ಸಾವುಗಳು ಸಂಭವಿಸುತ್ತಿವೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊರೊನಾ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿದ ಶಾಸಕ ಎಂ.ಬಿ.ಪಾಟೀಲ

ಕೊರೊನಾ ನಂತರದ ಕಾಯಿಲೆಗಳಿಂದ ಜನರು ಬಳಲುತ್ತಿದ್ದಾರೆ. ಗ್ರಾಮಗಳಲ್ಲಿ ಒಂದಕ್ಕೊಂದು ಅಂಟಿಕೊಂಡಿರುವ ಮನೆಗಳು, ಚಿಕ್ಕದಾದ ಓಣಿಗಳು, ಮನೆಗಳಲ್ಲಿ ಪ್ರತ್ಯೇಕ ಕೋಣೆಗಳ ಕೊರತೆ, ವ್ಯಾಧಿ ಬಗ್ಗೆ ಜನರಲ್ಲಿ ಭಯ, ಮೂಢನಂಬಿಕೆಗಳು, ರೋಗ ಪತ್ತೆ ಪರೀಕ್ಷೆ, ತಜ್ಞ ವೈದ್ಯರ ಬಳಿ ತಪಾಸಣೆಗೆ ಬರಲು ಹಣಕಾಸಿನ ತೊಂದರೆ ಇತ್ಯಾದಿ ಕಾರಣಗಳಿಂದ ಹಲವರು ಚಿಕಿತ್ಸೆಗೆ ಬರುತ್ತಿಲ್ಲ.

ಕೆಲವರು ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೆ, ಇನ್ನೂ ಕೆಲವರು ಸ್ವಯಂ ಲಕ್ಷಣಗಳಿಗನುಸಾರ ಅಂಗಡಿಗಳಲ್ಲಿ ದೊರೆಯುವ ಮಾತ್ರೆಗಳನ್ನು ಪಡೆಯುತ್ತಿದ್ದಾರೆ. ಇದರಿಂದ ವಾಸ್ತವದಲ್ಲಿ ಕೊರೊನಾ ರೋಗದ ಮಾಹಿತಿ ಸರ್ಕಾರಕ್ಕೆ ತಲುಪುವದಿಲ್ಲ. ಮತ್ತು ಸೋಂಕು ವ್ಯಾಪಿಸಿ, ಹೆಚ್ಚು ಹೆಚ್ಚು ಜನ ಬಲಿಯಾಗುತ್ತಿದ್ದಾರೆ.

ಉದಾಹರಣೆಗೆ ವಿಜಯಪುರ ಹೊರವಲಯದ ನನ್ನ ಸ್ವಗ್ರಾಮ ತೊರವಿಯಲ್ಲಿ 71 ಮಂದಿ ಸಾವನ್ನಪ್ಪಿದ್ದರು. ಆ ಪೈಕಿ ಕೊರೊನಾ, ಶ್ವಾಸಕೋಶ ತೊಂದರೆ, ಜ್ವರದಿಂದ ಬಳಲಿದವರು 41 ರೋಗಿಗಳು ಸೇರಿದ್ದಾರೆ. ತೊರವಿ ಒಂದು ಗ್ರಾಮದ ಸ್ಥಿತಿ ಹೀಗಿರುವಾಗ ಇಡೀ ಜಿಲ್ಲೆಯ ಎಲ್ಲ ಹಳ್ಳಿಗಳ ಸ್ಥಿತಿ ಹೇಗಿರಬಹುದು? ಎಂಬುದು ವೈಯಕ್ತಿಕವಾಗಿ ನನಗೆ ಆತಂಕಕ್ಕೀಡು ಮಾಡಿದೆ ಎಂದರು.

ಕೊರೊನಾ ಹರಡುವಿಕೆ ತಪ್ಪಿಸಲು ಜಿಲ್ಲಾಡಳಿತ ಪ್ರತಿ ಮನೆ ಮನೆ ಸಮೀಕ್ಷೆ ನಡೆಸಿ, ವ್ಯಕ್ತಿವಾರು ಆರೋಗ್ಯ ಮಾಹಿತಿ ದಾಖಲಿಸಬೇಕು. ಇಡೀ ಗ್ರಾಮದ ಅನಾರೋಗ್ಯ ಪೀಡಿತರ ಪಟ್ಟಿ ಸಿದ್ಧಪಡಿಸಿ, ರೋಗಲಕ್ಷಣಗಳ ಅನುಸಾರ ಚಿಕಿತ್ಸಗೆ ಅಗತ್ಯವಿರುವ ರೋಗಿಗಳನ್ನು ಆಸ್ಪತ್ರೆಗೆ ತರುವುದು ಹಾಗೂ ಆರೋಗ್ಯ ಇಲಾಖೆಯಿಂದ ಅಗತ್ಯವಿರುವ ಆರ್​​ಟಿಪಿಸಿಆರ್ ತಪಾಸಣೆ ಮಾಡಬೇಕು.

ಹೆಚ್ಚಿನ ರೋಗದಿಂದ ಬಳಲುತ್ತಿರುವವರಿಗೆ ಅಗತ್ಯ ಚಿಕಿತ್ಸೆಗೆ ಅನುಸಾರ ಆಸ್ಪತ್ರೆಗಳಿಗೆ ದಾಖಲಿಸುವುದು, ರೋಗ ಲಕ್ಷಣಳಿಗದ್ದವರಿಗೆ ಹೆಚ್​​ಆರ್​ಸಿಟಿ, ಎಕ್ಸ್ ರೇ, ರಕ್ತ ಸೇರಿದಂತೆ ಮತ್ತಿತರ ತಪಾಸಣೆ ಮಾಡಬೇಕು. ಜತೆಗೆ ಹಳ್ಳಿಯಿಂದ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಎಲ್ಲ ರೋಗ ಲಕ್ಷಣಗಳಿದ್ದವರಿಗೆ ಸರ್ಕಾರದಿಂದ ಉಚಿತವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಿಬೇಕು. ಏಕೆಂದರೆ ಖಾಸಗಿ ವಾಹನದವರು ಹತ್ತಾರು ಸಾವಿರ ರೂ. ವಸೂಲು ಮಾಡುತ್ತಿದ್ದು, ಇದನ್ನು ಭರಿಸಲು ಜನರಿಗೆ ತೊಂದರೆಯಾಗುತ್ತಿದೆ ಎಂದರು.

ಸರಳ ಮತ್ತು ಸುಲಭವಾಗಿ ಮನೆ ಮನೆ ಆರೋಗ್ಯ ಸರ್ವೇ, ಅನಾರೋಗ್ಯ ವ್ಯಕ್ತಿಗಳ ಮಾಹಿತಿ, ಅಗತ್ಯವಿರುವವರಿಗೆ ಚಿಕಿತ್ಸೆ ಈ ಮೂರು ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಂಡು ಇಡೀ ರಾಜ್ಯಕ್ಕೆ ಮಾದರಿಯಾಗುವುದರೊಂದಿಗೆ ನಮ್ಮ ಜಿಲ್ಲೆಯ ಜನತೆಯ ಆರೋಗ್ಯ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕು. ಅದಕ್ಕೆ ಅಗತ್ಯ ನೆರವು ಬಿ.ಎಲ್.ಡಿ.ಇ ಸಂಸ್ಥೆಯಿಂದ, ಶಾಸಕರ ನಿಧಿಯಿಂದ ಕೂಡ ಒದಗಿಸುವುದಾಗಿ ಹೇಳಿದರು.

ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್, ತಮ್ಮ ಸಲಹೆ ಯೋಗ್ಯವಾಗಿದ್ದು, ಸೋಮವಾರದಿಂದಲೇ ನಾವು ಈ ಕುರಿತು ಕಾರ್ಯಪ್ರವೃತ್ತರಾಗುತ್ತೇವೆ ಎಂದರು.

ABOUT THE AUTHOR

...view details