ಕರ್ನಾಟಕ

karnataka

By

Published : Sep 6, 2022, 7:23 AM IST

ETV Bharat / state

ವಿಜಯಪುರ ಜಿಲ್ಲಾಸ್ಪತ್ರೆಗೆ ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ ಪ್ರಶಸ್ತಿ ಗರಿ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುವ ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ ಪ್ರಶಸ್ತಿ ವಿಜಯಪುರ ಜಿಲ್ಲಾಸ್ಪತ್ರೆಗೆ ಸಂದಿದೆ.

vijayapur-district
ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ ಪ್ರಶಸ್ತಿಗೆ ಭಾಜನವಾದ ವಿಜಯಪುರ ಜಿಲ್ಲಾಸ್ಪತ್ರೆ

ವಿಜಯಪುರ:ಇಲ್ಲಿನ ಜಿಲ್ಲಾಸ್ಪತ್ರೆಗೆ ಈಗ ಕೇಂದ್ರ ಸರಕಾರದಿಂದ ಮತ್ತೊಂದು ಗೌರವ ಪ್ರಾಪ್ತವಾಗಿದೆ‌. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಾರಿ ರಾಜ್ಯದಲ್ಲಿ ಜಿಲ್ಲಾಸ್ಪತ್ರೆ ವಿಭಾಗದಲ್ಲಿ ನಾನಾ ಅಂಶಗಳನ್ನು ಪರಿಗಣಿಸಿ ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ (NQAS) ಪ್ರಶಸ್ತಿ ಪ್ರಕಟಿಸಿದೆ. ಈ ವಿಭಾಗದ ಗೌರವಕ್ಕೆ ವಿಜಯಪುರ ಜಿಲ್ಲಾಸ್ಪತ್ರೆ ಪಾತ್ರವಾಗಿದೆ.

ಕಳೆದ ಜೂ. 22 ಮತ್ತು 23ರಂದು ವಿಜಯಪುರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ಜಿಲ್ಲಾಸ್ಪತ್ರೆಯ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿತ್ತು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಘೋಷಣೆ

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿರುವ ಸ್ವಚ್ಛತೆ, ರೋಗಿಗಳ ನೋಂದಣಿ ವ್ಯವಸ್ಥೆ, ರೋಗಿಗಳ ರೋಗಗಳ ಮಾಹಿತಿ ದತ್ತಾಂಶ ಮತ್ತು ಮಾಹಿತಿ ನಿರ್ವಹಣೆ, ವೈದ್ಯರು ಮತ್ತು ದಾದಿಯರು ಹಾಗೂ ಇತರ ಸಿಬ್ಬಂದಿಯ ಸೇವೆ, ಪ್ರಯೋಗಾಲಯಗಳು, ಶೌಚಾಲಯ ವ್ಯವಸ್ಥೆ, ಚಿಕಿತ್ಸೆ ಕೊಠಡಿ, ವಾರ್ಡ್​ಗಳ ಮಾಹಿತಿ ನಕ್ಷೆ, ಚಿಕಿತ್ಸೆ ಪಡೆದ ರೋಗಿಗಳಿಂದ ಅಭಿಪ್ರಾಯವನ್ನು ಕೇಂದ್ರ ಅಧಿಕಾರಿಗಳ ತಂಡ ಸಂಗ್ರಹಿಸಿತ್ತು.

ರಾಜ್ಯದಲ್ಲಿ ಜಿಲ್ಲಾಸ್ಪತ್ರೆಗಳ ವಿಭಾಗದಲ್ಲಿ ವಿಜಯಪುರ ಮಾತ್ರ ಆಯ್ಕೆಯಾಗಿದ್ದು, ನಾನಾ ಮಾನದಂಡಗಳನ್ನು ಕ್ರೋಢೀಕರಿಸಿ ಕೇಂದ್ರ ನಿಗದಿಪಡಿಸಿದ 100ರಲ್ಲಿ ಶೇ. 97 ರಷ್ಟು ಅಂಕಗಳನ್ನು ಪಡೆದಿದೆ. ಈ ಮೂಲಕ ಉತ್ತಮ ಸೇವೆಯ ವಿಜಯಪುರ ಜಿಲ್ಲಾಸ್ಪತ್ರೆ ಕರ್ನಾಟಕವಷ್ಟೇ ಅಲ್ಲದೇ ದೇಶದ ಗಮನ ಸೆಳೆದಿದೆ.

ಶೇ 95 ಅಂಕಗಳನ್ನು ಗಳಿಸಿದ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (HIMS) ವೈದ್ಯಕೀಯ ಸಂಸ್ಥೆಗಳ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನವಾಗಿದೆ. ಸಮುದಾಯ ಆರೋಗ್ಯ ಕೇಂದ್ರಗಳ ವಿಭಾಗದಲ್ಲಿ ಕೋಲಾರ ಜಿಲ್ಲೆಯ ಬೆತಮಂಗಲ ಸಮುದಾಯ ಆರೋಗ್ಯ ಕೇಂದ್ರ 79.26 ಅಂಕದೊಂದಿಗೆ ರಾಜ್ಯದ ಅತ್ಯುತ್ತಮ ಸಮುದಾಯ ಆರೋಗ್ಯ ಕೇಂದ್ರ ಪ್ರಶಸ್ತಿ ಎಂಬ ಪ್ರಶಸ್ತಿ ಗಳಿಸಿಕೊಂಡಿದೆ.

ಜಿಲ್ಲಾ ಶಸ್ತ್ರಚಿಕತ್ಸಕರ ಸಂತಸ:ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್. ಎಲ್. ಲಕ್ಕಣ್ಣವರ ಸಂತಸ ವ್ಯಕ್ತಪಡಿಸಿ, ಜಿಲ್ಲಾಸ್ಪತ್ರೆಯ ವೈದ್ಯರು, ಸಿಬ್ಬಂದಿ ಮತ್ತು ಇಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಸಹಕಾರದಿಂದಾಗಿ ಈ ಗೌರವ ಲಭಿಸಿದೆ ಎಂದರು.

ಇದನ್ನೂ ಓದಿ :ಆಸ್ತಿ ನೋಂದಣಿಗಾಗಿ ಜನರ ಅಲೆದಾಟ ತಪ್ಪಿಸಲು ಹೊಸ ನೋಂದಣಿ ಪದ್ಧತಿ ಜಾರಿ: ಸಚಿವ ಆರ್.‌ಅಶೋಕ್

ABOUT THE AUTHOR

...view details