ವಿಜಯಪುರ:ದೇಶದಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಹೇರಲಾಗುತ್ತಿದೆ ಎನ್ನುವ ಕೂಗು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಆಯಾ ರಾಜ್ಯಗಳು ನಮ್ಮ ಮಾತೃ ಭಾಷೆ ನಮಗೆ ಶೇಷ್ಠ ಎನ್ನುವಾಗ, ಇಲ್ಲೊಂದು ವ್ಯಾಪಾರಿ ಕುಟುಂಬ ಪುರಾತನ ಭಾಷೆಯಾಗಿರುವ ಸಂಸ್ಕೃತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಲ್ಲಿಯೇ ವ್ಯವಹಾರ ನಡೆಸುತ್ತಿದ್ದಾರೆ.
ವಿಜಯಪುರ ನಗರದ ಮೀನಾಕ್ಷಿ ಚೌಕ್‌ನಲ್ಲಿರುವ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಸಹೋದ್ಯೋಗಿ ಹಾಗೂ ಮಾಲೀಕರೊಂದಿಗೆ ಸಂಸ್ಕೃತ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಗ್ರಾಹಕರು ಇಚ್ಛೆಪಟ್ಟಲ್ಲಿ ಅವರೊಂದಿಗೂ ಸಹ ಇದೇ ಭಾಷೆಯನ್ನೇ ಬಳಸುವ ಮೂಲಕ ಭಾಷೆ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಬಟ್ಟೆ ಅಂಗಡಿ ಮಾಲೀಕ ರಾಮಸಿಂಗ್ ರಜಪೂತ ರಾಜಸ್ಥಾನದವರು. ಬಟ್ಟೆ ವ್ಯಾಪಾರ ಮಾಡುತ್ತಾ ತಮ್ಮ ಎರಡ್ಮೂರು ತಲೆಮಾರುಗಳ ಹಿಂದೆ ವಿಜಯಪುರ ನಗರಕ್ಕೆ ಬಂದು ನೆಲೆಸಿದ್ದಾರೆ. ಸುಮಾರು ವರ್ಷಗಳಿಂದ ಸಣ್ಣ ಬಟ್ಟೆ ವ್ಯಾಪಾರ ಮಾಡುತ್ತಿದ್ದು ಸದ್ಯ ಇವರ ವ್ಯಾಪಾರ ವಹಿವಾಟು ದೊಡ್ಡದಾಗಿ ಬೆಳೆದಿದೆ. ಇವರ ಬಟ್ಟೆ ಅಂಗಡಿಯಲ್ಲಿ ಸುಮಾರು 70ಕ್ಕೂ ಹೆಚ್ಚು ಜನ ಕಾರ್ಮಿಕರು ಕೆಲಸ ಮಾಡುತ್ತಾರೆ. ಈ ಪೈಕಿ ಮುಸ್ಲಿಂ ಯುವಕ, ಯುವತಿಯರೇ ಹೆಚ್ಚಿದ್ದಾರೆ ಎನ್ನುವುದು ವಿಶೇಷ.
ಸಂಸ್ಕೃತ ಭಾಷೆ ಇವರ ಉಸಿರು:ಈ ಅಂಗಡಿಯಲ್ಲಿ ಎಲ್ಲರೂ ವ್ಯವಹರಿಸುವ ಭಾಷೆ ಸಂಸ್ಕೃತ. ಅಂಗಡಿಯ ಮಾಲೀಕ ಸಂಸ್ಕೃತದಲ್ಲಿ ಮಾತನಾಡುತ್ತಿರುವುದಕ್ಕೆ ಒಂದು ನಿದರ್ಶನವೂ ಇದೆ. 18 ವರ್ಷಗಳ ಹಿಂದೆ ಮಕ್ಕಳು ಮತ್ತು ಪತ್ನಿಯೊಡನೆ ಜ್ಞಾನ ಯೋಗಾಶ್ರಮ, ಸಿದ್ಧೇಶ್ವರ ಮಠಕ್ಕೆ ಹೋಗಿದ್ದಾಗ ಅಲ್ಲಿ ಸಂಸ್ಕೃತದಲ್ಲಿಯೇ ಪ್ರವಚನ ನಡೆಯುತ್ತಿರುತ್ತದೆ. ದೇವರಿಗೆ ನಮಸ್ಕರಿಸಿ ವಾಪಸ್ ತೆರಳುವಾಗ ಶ್ರೀಗಳು ತಮ್ಮ ಪ್ರವಚನ ಕೇಳುವಂತೆ ಸಲಹೆ ನೀಡುತ್ತಾರೆ. ಇವರು ಪ್ರವಚನಕ್ಕೆ ಕುಳಿತಾಗ ಸಂಸ್ಕೃತ ಭಾಷೆಗೆ ಎಷ್ಟು ಮಹತ್ವವಿದೆ ಎಂದು ಅರ್ಥವಾಗುತ್ತದೆ. ಹೀಗಾಗಿ ಇವರು ತಮ್ಮ ಮಾತೃ ಭಾಷೆಯನ್ನೇ ಬಿಟ್ಟು ಅಂದಿನಿಂದ ಇಂದಿನವರೆಗೂ ಸಂಸ್ಕೃತ ಭಾಷೆಯೇ ಇವರ ಉಸಿರಾಗಿದೆ.