ವಿಜಯಪುರ: 2018-19ನೇ ಸಾಲಿನಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ 250.62 ಕೋಟಿ ರೂ. ವಹಿವಾಟು ನಡೆಸಿದ್ದು, ಕಳೆದ ವರ್ಷಕ್ಕಿಂತ ಶೇ. 14.5 ರಷ್ಟು ವಹಿವಾಟು ಹೆಚ್ಚಳಗೊಂಡಿದೆ. 27.07 ಕೋಟಿ ರೂ. ಲಾಭ ಗಳಿಸಿದ್ದು, 2.92 ಕೋಟಿ ರೂ. ನಿವ್ವಳ ಲಾಭ ಪಡೆದುಕೊಂಡು ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ಸಂಘದ ನಿರ್ದೇಶಕ ಶ್ರೀಶೈಲಗೌಡ ಪಾಟೀಲ ತಿಳಿಸಿದ್ದಾರೆ.
ವಿಜಯಪುರ-ಬಾಗಲಕೋಟೆ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಸ್‌ಒ 22,000 ಗುಣಮಟ್ಟದ ಪ್ರಮಾಣಪತ್ರ ಹೊಂದಿದ್ದು, ಬರದ ಹಿನ್ನೆಲೆಯಲ್ಲಿ ಅವಳಿ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗಾಗಿ 3 ಕೋಟಿ ರೂ. ನೆರವು ನೀಡಲಾಗಿದೆ. ಹಾಲು ಖರೀದಿ ದರದಲ್ಲಿ 1 ರೂ. ಹೆಚ್ಚಿಸಲಾಗಿದೆ. ಪ್ರತಿ 50 ಕೆಜಿ ಚೀಲ ಪಶು ಆಹಾರಕ್ಕೆ 100 ರೂ. ರಿಯಾಯಿತಿ ನೀಡಲಾಗಿದೆ. ಏಪ್ರಿಲ್‌ನಿಂದಲೇ ಹಾಲು ಉತ್ಪಾದಕರ ಖಾತೆಗೆ ಸರ್ಕಾರದಿಂದ ನೇರವಾಗಿ ಹಣ ಜಮೆಯಾಗುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಎಂದು ಹೇಳಿದ್ದಾರೆ.
ಐದು ವರ್ಷದಲ್ಲಿ 3 ಲಕ್ಷ ಲೀಟರ್ ಹಾಲು ಉತ್ಪಾದನೆ:
ಮುಂದಿನ ಐದು ವರ್ಷದಲ್ಲಿ ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಸಂಘ 3 ಲಕ್ಷ ಲೀಟರ್ ಹಾಲು ಉತ್ಪಾದನೆ ಗುರಿ ಹೊಂದಿದೆ ಎಂದರು. ಸದ್ಯ 1.75 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಇನ್ನಷ್ಟು ಹೆಚ್ಚಳಗೊಳಿಸುವ ಯೋಜನೆ ರೂಪಿಸಲಾಗಿದೆ. ಅವಳಿ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಬಾಗಲಕೋಟೆಯಲ್ಲಿ ಡೇರಿ ನಿರ್ಮಾಣ:
ಬಾಗಲಕೋಟೆ ಜಿಲ್ಲೆಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ 22 ಕೋಟಿ ರೂ. ವೆಚ್ಚದಲ್ಲಿ ಡೇರಿ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಇನ್ನುಳಿದಂತೆ 9.30 ಕೋಟಿ ರೂ. ವೆಚ್ಚದಲ್ಲಿ ಸಿವಿಲ್ ಕಾಮಗಾರಿ, ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್ ಕಾಮಗಾರಿ, 40 ಲಕ್ಷ ರೂ. ವೆಚ್ಚದಲ್ಲಿ ಪ್ಯಾಕಿಂಗ್ ಯಂತ್ರ ಅಳವಡಿಕೆ, ಜಮಖಂಡಿಯಲ್ಲಿ10 ಮೆಟ್ರಿಕ್ ಟನ್ ಸಾಮರ್ಥ್ಯದ 25 ಕೋಟಿ ರೂ. ವೆಚ್ಚದಲ್ಲಿ ಹಾಲಿನ ಪುಡಿ ತಯಾರಿಕೆ ಘಟಕ ಸ್ಥಾಪನೆ, ವಿಜಯಪುರ ಡೇರಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ರೆಫ್ರಿಜಿರೇಷನ್ ವ್ಯವಸ್ಥೆ ಬಲವರ್ಧನೆ ಮತ್ತು ಕೋಲ್ಡ್ ರೂಂ, 5 ಸಾವಿರ ಲೀಟರ್ ಸಾಮರ್ಥ್ಯದ ಐಸ್‌ಕ್ರಿಂ ತಯಾರಿಕೆ ಘಟಕ, ಪರಿಸರ ಸಂರಕ್ಷಣೆಗಾಗಿ 500 ಔಷಧೀಯ ಹಾಗೂ ಇತರ ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.