ವಿಜಯಪುರ:ಮಹಾರಾಷ್ಟ್ರದಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆ ಆಲಮಟ್ಟಿ ಜಲಾಶಯ ಈಗ ಸಂಪೂರ್ಣ ಭರ್ತಿಯಾಗಿದೆ. ಸದ್ಯ ಜಲಾಶಯದಲ್ಲಿ 123.081 ಟಿಎಂಸಿ ನೀರು ಸಂಗ್ರಹವಾಗಿದೆ.
ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿ ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಕೊನೆಗೂ ಆಗಸ್ಟ್ ಅಂತ್ಯಕ್ಕೆ ಸಂಪೂರ್ಣ ಭರ್ತಿಯಾಗಿದೆ. ಕಳೆದ ವರ್ಷ ಆಗಸ್ಟ್ ಮೊದಲ ವಾರದಲ್ಲಿ ಜಲಾಶಯ ಭರ್ತಿಯಾಗಿತ್ತು. ಈ ವರ್ಷ ಸ್ವಲ್ಪ ತಡವಾದರೂ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಇಂದು ಜಲಾಶಯದ ನೀರಿನ ಮಟ್ಟ 519.60 ಮೀಟರ್ ಇದ್ದು, 123.081 ಟಿಎಂಸಿ ನೀರು ಸಂಗ್ರಹವಾಗಿದೆ .
ಜಲಾಶಯ ಭರ್ತಿ ಮಾಡಲು ಕೆಬಿಜೆಎನ್ಎಲ್ ಅಧಿಕಾರಿಗಳು ನೀರಿನ ಹೊರ ಹರಿವು ಕಡಿಮೆ ಮಾಡಿದ್ದು, ಎಲ್ಲಾ 26 ಕ್ರೆಸ್ಟ್ ಗೇಟ್ ಬಂದ್ ಮಾಡಿದ್ದಾರೆ. ಮಹಾರಾಷ್ಟ್ರದಿಂದಲೂ ಒಳಹರಿವು ಕಡಿಮೆಯಾಗಿದ್ದು, 37861 ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದೆ. ಅದಕ್ಕೆ ತಕ್ಕಂತೆ 28921 ಕ್ಯೂಸೆಕ್ ನೀರನ್ನು ಮಾತ್ರವೇ ಹೊರ ಬಿಡಲಾಗುತ್ತಿದೆ.
ಭರ್ತಿ ಮುನ್ನವೇ ಬಾಗಿನ:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತರ ಕರ್ನಾಟಕ ಪ್ರವಾಹ ಪರಿಸ್ಥಿತಿ ನೋಡಲು ಆ. 25ರಂದು ವೈಮಾನಿಕ ಸಮೀಕ್ಷೆ ನಡೆಸಿದ್ದರು. ಅಂದು ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಿದ್ದ ವೇಳೆ ಪೂರ್ವ ನಿಗದಿ ಇಲ್ಲದಿದ್ದರೂ ಕೃಷ್ಣೆಗೆ ಬಾಗಿನ ಅರ್ಪಿಸಿದ್ದರು. ಅಂದು ಜಲಾಶಯದಲ್ಲಿ 123.81 ಟಿಎಂಸಿ ಸಾಮರ್ಥ್ಯದ ಬದಲು ಇನ್ನೂ 122.308 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತು. ಆದರೂ ಜಲಾಶಯ ಸಂಪೂರ್ಣ ಭರ್ತಿಯಾಗುವ ಮುನ್ನವೇ ಸಿಎಂ ಬಿಎಸ್ವೈ ಕೃಷ್ಣೆಗೆ ಬಾಗಿನ ಅರ್ಪಿಸಿದ್ದರು. ಬಾಗಿನ ಅರ್ಪಣೆಯ ನಾಲ್ಕು ದಿನಗಳ ನಂತರ ಜಲಾಶಯ ಭರ್ತಿಯಾಗಿದೆ.