ವಿಜಯಪುರ :ಜಿಲ್ಲೆಯವಿಮಾನ ನಿಲ್ದಾಣ ಕಾಮಗಾರಿ ಸಂಪೂರ್ಣ ಪ್ರಗತಿಯತ್ತ ಸಾಗಿರುವುದು ಸಂತೋಷದ ಸಂಗತಿ. ಮುಂದಿನ ವರ್ಷ ಜನವರಿ ಇಲ್ಲ, ಫೆಬ್ರವರಿಯಲ್ಲಿ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ವಿಮಾನ ಹಾರಾಟ ಮಾಡುವ ನಿಟ್ಟಿನಲ್ಲಿ ನಾನು ಸಹ ವೈಯುಕ್ತಿಕವಾಗಿ ಸರ್ಕಾರದ ಮೇಲೆ ಒತ್ತಡ ಹೇರುವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣಕ್ಕೆ 347.92 ಕೋಟಿ ರೂ. ಹಣ ಮಂಜೂರಾಗಿದ್ದು, ಅದರಲ್ಲಿ 253 ಕೋಟಿ ರೂ. ಖರ್ಚಾಗಿದೆ. ಈಗಾಗಲೇ ಟ್ಯಾಕ್ಸಿ ವೇ, ರನ್-ವೇ, ಐಸೋಲೇಷನ್ ಬೇ, ಒಳ ರಸ್ತೆ ಸಂಪರ್ಕ, ಆಂತರಿಕ ರಸ್ತೆ ಹಾಗೂ ಟರ್ಮಿನಲ್ ಕಾಮಗಾರಿ ಪ್ರಗತಿಯಲ್ಲಿದೆ. ಫೆಬ್ರವರಿ ತಿಂಗಳಲ್ಲಿ ಗಗನಯಾನ ಆರಂಭವಾಗಲಿ ಎಂಬುದು ನನ್ನ ಆಶಯ. ಜನರಿಗೆ ಒಳ್ಳೆಯದಾದರೆ ಸಾಕು. ವಿಮಾನ ನಿಲ್ದಾಣ ಕಾಮಗಾರಿ ಫೌಂಡೇಷನ್ ಹಾಕಿದ್ದು, ಅನುದಾನ ಕೊಟ್ಟಿದ್ದು ನಮ್ಮ ಬಿಜೆಪಿ ಸರ್ಕಾರ. ಹಾಗಿದ್ದರೆ ಈ ಹಿಂದೆ ಸಿದ್ಧರಾಮಯ್ಯ ಅವರ ಸರ್ಕಾರ ಅವಧಿಯಲ್ಲಿ ಏಕೆ ವಿಮಾನ ನಿಲ್ದಾಣ ಪೂರ್ಣ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಕಳೆದ 9 ವರ್ಷಗಳ ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ವಿಜಯಪುರ ಜಿಲ್ಲೆಯ ಕುಡಿಯುವ ನೀರಿಗೂ ಆದ್ಯತೆ ನೀಡಿದೆ. 11050.50 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ. ರೈಲ್ವೇ ಜಾಲ ವಿಸ್ತರಣೆ, ರಸ್ತೆ ಸಂಪರ್ಕ ಸೇರಿದಂತೆ ಅನೇಕ ಭೌತಿಕ ಕಾಮಗಾರಿಗೆ ಆದ್ಯತೆ ನೀಡಿದಂತೆ ಪ್ರತಿಯೊಬ್ಬರಿಗೂ ಶುದ್ಧವಾದ ಕುಡಿಯುವ ನೀರು ಒದಗಿಸುವ ಸಂಕಲ್ಪವನ್ನು ಸಾಕಾರಗೊಳಿಸಿದ್ದು, ಕೇಂದ್ರ ಪುರಸ್ಕೃತ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಸಾವಿರಾರು ಕೋಟಿ ರೂ. ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳಲಾಗಿದೆ.
ಅಮೃತ ಯೋಜನೆಯಡಿಯಲ್ಲಿ ವಿಜಯಪುರ ನಗರದ ನೀರು ಪೈರೈಕೆಗಾಗಿ 195.35 ಕೋಟಿ ರೂ. ಅನುದಾನ, ಅದೇ ತೆರನಾಗಿ ವಿಜಯಪುರ ನಗರದ ಆರು ಉದ್ಯಾನವನ ನಿರ್ಮಾಣಕ್ಕಾಗಿಯೂ ಈ ಯೋಜನೆಯಡಿ 4ಕೋಟಿ ರೂ. ಅನುದಾನ ಒದಗಿಸಲಾಗಿದೆ. ಗ್ರಾಮೀಣ ಕುಡಿವ ನೀರಿಗಾಗಿ ಜಲ ಜೀವನ್ ಮಿಷನ್ ಅಡಿ ಭೌತಿಕವಾಗಿ 1016 ನಳಗಳ ಜೋಡಣೆಗಾಗಿ 406.25 ಕೋಟಿ ರೂ. ಖರ್ಚು ಮಾಡಲಾಗಿದೆ.