ವಿಜಯಪುರ:ಜಲ್ಲೆಯಲ್ಲಿ ಕೊರೊನಾ ಹೊಡೆತದ ನಡುವೆಯೂ ಟೊಮೆಟೊ ಸೇರಿ ಇತರೆ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದ್ದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಲ್ಲಿನ ಎಲ್ಬಿಎಸ್ ಮಾರುಕಟ್ಟೆ ಹಾಗೂ ಜನತಾ ಮಾರುಕಟ್ಟೆಯಲ್ಲಿ ಕಳೆದೊಂದು ವಾರದಿಂದಲೂ ನಿರಂತರವಾಗಿ ಟೊಮೆಟೊ ಬೆಲೆ ಏರಿಕೆಯಾಗುತ್ತಿದೆ.
ಹೀಗಾಗಿ ನಗರದ ಜನರು ಮಾರುಕಟ್ಟಗೆ ಬಂದರೂ ಬೆಲೆ ಕೇಳಿ ಸುಮ್ಮನಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೇ ಅಲ್ಲದೆ ದುಬಾರಿ ಹಣ ನೀಡಿದರೂ ಗುಣಮಟ್ಟದ ತರಕಾರಿ ಸಿಗುತ್ತಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಅಲ್ಲದೆ ಮಾರುಕಟ್ಟೆಯಲ್ಲಿ ಸದ್ಯ 40 ರಿಂದ 60 ರೂ. ಕೆ.ಜಿ ಟೊಮೆಟೊ ಮಾರಾಟವಾದರೆ ಇತ್ತ ಮನೆ ಮನೆಗೆ ಹೋಗಿ ತರಕಾರಿ ಮಾರಾಟ ಮಾಡುವವರು 7೦ರ ವರೆಗೂ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಲಾಕ್‌ಡೌನ್ ಅವಧಿಯಲ್ಲಿ ಅತ್ಯಂತ ಕಡಿಮೆ ಬೆಲೆ ಇದ್ದ ಟೊಮೆಟೊ ಬೆಲೆ ಇದ್ದಕ್ಕಿದ್ದಂತೆ ಏರಿಕೆಯಾಗಿದ್ದಕ್ಕೆ ಗ್ರಾಹಕರೇ ಆಶ್ಚರ್ಯ ಪಡುವಂತಾಗಿದೆ. ಮಾರುಕಟ್ಟೆಯಲ್ಲಿ ಟೊಮೆಟೊ ಕೊರತೆಯಿಂದಾಗಿ ಬೆಲೆಯಲ್ಲಿ ಏರಿಕೆಯಾಗಿದೆ ಎಂಬ ವಾದವನ್ನು ತಳ್ಳಿಹಾಕಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಂಟಿ ನಿರ್ದೇಶಕ ಆರ್.ಎಂ ಕುಮಾರಸ್ವಾಮಿ, ಹುಬ್ಬಳ್ಳಿ, ಬೆಳಗಾವಿ ಭಾಗದಿಂದ ಎಪಿಎಂಸಿಗೆ ಪ್ರತಿದಿನ 2 ಟನ್ ಟೊಮೆಟೊ ಬರುತ್ತಿದೆ. ಒಂದು ಟ್ರೇಗೆ 400 ರೂ. ವರೆಗೆಗೆ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ನೆರವಾಗಿದೆ ಎಂದಿದ್ದಾರೆ.
ಇದೆಲ್ಲದರ ನಡುವೆಯೂ ಕೊರೊನಾ ಆಪತ್ಕಾಲದಲ್ಲಿ ಬೆಲೆ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ.