ಕರ್ನಾಟಕ

karnataka

ETV Bharat / state

ಕೈಕೊಟ್ಟ ಮುಂಗಾರು, ಗಗನಕ್ಕೇರಿದ ತರಕಾರಿ ಬೆಲೆ.. ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಆವಕ ಪ್ರಮಾಣವೂ ಕಡಿಮೆ... - ವಾರದ ಸಂತೆ

ವಿಜಯಪುರ ಜಿಲ್ಲೆಯ ಸುತ್ತಮುತ್ತಲಿನ ಭಾಗದಲ್ಲಿ ರೈತರು ತರಕಾರಿಯನ್ನು ಸಮೃದ್ಧವಾಗಿ ಬೆಳೆಯುತ್ತಾರೆ. ಆದರೆ ಮಳೆಯ ಅಭಾವದಿಂದ ತರಕಾರಿ ಬೆಳೆ ಒಣಗಿದ್ದು, ಮಾರುಕಟ್ಟೆಗೆ ಆವಕ ಪ್ರಮಾಣ ಗಣನೀಯ ಕ್ಷೀಣಿಸಿದೆ. ತರಕಾರಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

Vegetable market
ವಿಜಯಪುರ ನಗರದ ತರಕಾರಿ ಮಾರುಕಟ್ಟೆ

By

Published : Jun 17, 2023, 4:40 PM IST

Updated : Jun 17, 2023, 5:45 PM IST

ಕೈಕೊಟ್ಟ ಮುಂಗಾರು ಗಗನಕ್ಕೇರಿದ ತರಕಾರಿ ಬೆಲೆ

ವಿಜಯಪುರ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಜಿಲ್ಲೆಯಲ್ಲಿ ಅನ್ನದಾತರು ಇನ್ನೂ ಬಿತ್ತನೆಯನ್ನೇ ಆರಂಭಿಸಿಲ್ಲ. ಜೊತೆಗೆ ಬಿಸಿಲಿನ ತಾಪಮಾನವೂ ಏರಿರುವ ಕಾರಣ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಆವಕ ಪ್ರಮಾಣವೂ ಕಡಿಮೆಯಾಗಿ ಸಗಟು ಮಾರುಕಟ್ಟೆಯಲ್ಲೇ ಬೆಲೆ ಗಗನಕ್ಕೇರಿದೆ. ಇದರ ಪರಿಣಾಮ ವಾರದ ಸಂತೆಯಲ್ಲೂ ತರಕಾರಿ ಬೆಲೆ ದ್ವಿಗುಣಗೊಂಡಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ವಿಜಯಪುರ ಜಿಲ್ಲೆಯ ಸುತ್ತಮುತ್ತಲಿನ ಭಾಗದಲ್ಲಿ ರೈತರು ತರಕಾರಿಯನ್ನು ಸಮೃದ್ಧವಾಗಿ ಬೆಳೆಯುತ್ತಿದ್ದು, ಮಳೆಯ ಅಭಾವದಿಂದ ತರಕಾರಿ ಬೆಳೆ ಒಣಗಿಹೋಗಿದೆ. ಮಾರುಕಟ್ಟೆಗೆ ಆವಕ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಗ್ಗಿದೆ. ಹೊರಭಾಗದಿಂದಲೂ ಎಪಿಎಂಸಿ ಮಾರುಕಟ್ಟೆಗೆ ತರಕಾರಿಗಳು ಬಾರದಿರುವುದರಿಂದ ಇದ್ದ ತರಕಾರಿ ದಲ್ಲಾಳಿಗಳು ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.

ವಾರದ ಸಂತೆ, ಮಾರುಕಟ್ಟೆಯ ಬೆಲೆ..ಪ್ರತಿ ಕೆಜಿ ಲೆಕ್ಕದಲ್ಲಿ ಹಸಿ ಮೆಣಸಿನಕಾಯಿ 20 ರೂ. ಇದ್ದದ್ದು 50 ರೂ.ಗೆ ಹೆಚ್ಚಳವಾಗಿದೆ. ಬಿನ್ಸ್ 70-90 ರೂ. ಗೆ ಬಂದಿದೆ. ಕ್ಯಾರೆಟ್ 50 ರೂ. ದಿಂದ 80 ರೂ., ಹಿರೇಕಾಯಿ 40 ರೂ. ಇದ್ದದ್ದು 80 ರೂ.ಗೆ ಏರಿಕೆಯಾಗಿದೆ. ಆಲೂಗಡ್ಡೆ 15-30 ರೂ., ಟೊಮೆಟೊ 20 ರೂ. ಇದ್ದದ್ದು 70 ರೂ.ಗೆ ಏರಿದೆ. ಬದನೆಕಾಯಿ 20ರೂ. ಇದ್ದದ್ದು 45 ರೂ. ಆಗಿದೆ. ಬಳ್ಳೊಳ್ಳಿ 70-100 ರೂ. ತಲುಪಿದೆ.

ಸೊಪ್ಪು ಬೆಲೆ ಸಹ ಏರಿಕೆ ಕಂಡಿದೆ. ಕೊತ್ತಂಬರಿ ಸೊಪ್ಪು ಸಣ್ಣ ಕಟ್‌ಗೆ 20 ರೂ. ಇದ್ದರೆ, ದೊಡ್ಡ ಕಟ್‌ಗೆ 50 ರೂ. ಆಗಿದೆ. ವಿವಿಧ ಸೊಪ್ಪುಗಳಾದ ರಾಜಗಿರಿ, ಮೆಂತ್ಯ, ಪುಂಡಿಸೊಪ್ಪು ಬೆಲೆಗಳು ಸಹ ಪ್ರತಿ ಕಟ್‌ಗೆ ನೀಡುತ್ತಿದ್ದ ಬೆಲೆ ಈಗ ದ್ವಿಗುಣಗೊಂಡಿದೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ..ವಿಜಯಪುರದ ಕೃಷಿ ಮಾರುಕಟ್ಟೆ ಸಮಿತಿಯ ತರಕಾರಿ ಮಂಡಿಯಲ್ಲಿ ನಿತ್ಯ ಬರುತ್ತಿದ್ದ ತರಕಾರಿ ಆವಕ ಕಡಿಮೆಯಾಗಿದೆ. ಗುರುವಾರ ಎಪಿಎಂಸಿಗೆ ಬಂದ ತರಕಾರಿ ಆವಕದ ಪ್ರಮಾಣ, ಕೆಲವು ಪ್ರಮುಖ ತರಕಾರಿ ಬೆಲೆಯ ಅಂಕಿ-ಅಂಶ ಹೀಗಿದೆ.

ಹಸಿಮೆಣಸಿನಕಾಯಿ 50 ಕ್ವಿಂಟಲ್‌ದಷ್ಟು ಮಾರುಕಟ್ಟೆಗೆ ಬಂದಿದೆ. ಪ್ರತಿ ಕ್ವಿಂಟಾಲ್‌ಗೆ 2500-5000 ರೂ., ಬಿನ್ಸ್ 10 ಕ್ವಿಂಟಾಲ್, ಪ್ರತಿ ಕ್ವಿಂಟಾಲ್‌ಗೆ 3000- 6000 ರೂ. ಹಿರೇಕಾಯಿ 5 ಕ್ವಿಂಟಾಲ್, ಪ್ರತಿ ಕ್ವಿಂಟಾಲ್‌ಗೆ 3000-6000 ರೂ., ಬದನೆಕಾಯಿ 12 ಕ್ವಿಂಟಾಲ್, 1000-2500 ರೂ. ಪ್ರತಿ ಕ್ವಿಂಟಾಲ್‌ಗೆ, ಆಲೂಗಡ್ಡೆ- 100 ಕ್ವಿಂಟಾಲ್, 1000-2000 ರೂ. ಪ್ರತಿ ಕ್ವಿಂಟಾಲ್‌ಗೆ, ಡೊಣ್ಣೆ ಮೆಣಸಿನಕಾಯಿ 10 ಕ್ವಿಂಟಾಲ್, ಪ್ರತಿ ಕ್ವಿಂಟಾಲ್‌ಗೆ 3000-6000 ರೂ.,

ಗಜ್ಜರಿ 6 ಕ್ವಿಂಟಾಲ್, ಪ್ರತಿ ಕ್ವಿಂಟಾಲ್‌ಗೆ 3000-6000 ರೂ., ಟೊಮೆಟೊ 600 ಟ್ರೇ ಬಂದಿದ್ದು, ಪ್ರತಿ ಟ್ರೇ 300-600, ಹೂಕೋಸು 400 ಚೀಲ, ಪ್ರತಿ ಚೀಲಕ್ಕೆ 250-400 ರೂ., ಕ್ಯಾರೆಟ್ 400 ಟ್ರೇ, ಪ್ರತಿ ಟ್ರೇ 200-300 ರೂ. ಬೆಂಡಿಕಾಯಿ 100 ಟ್ರೇ., ಪ್ರತಿ ಟ್ರೇ 400-600 ರೂ. ಉಳ್ಳಾಗಡ್ಡಿ (ಈರುಳ್ಳಿ) 3000 ಚೀಲ.

ಪ್ರತಿ ಚೀಲಕ್ಕೆ 300-1300 ರೂ. ಲಿಂಬು 9 ಸಾವಿರ ಡಾಗ್​​​(ನಿಗದಿಗೊಳಿಸಿದ ಮೊಟೆ), ಪ್ರತಿ ಡಾಗ್‌ಗೆ 500-1500 ರೂ., ಬೇಸಿಗೆಯಲ್ಲಿ 3000 ರೂ.ಗೆ ಒಂದು ಡಾಗ್ ಮಾರಾಟವಾಗಿತ್ತು. ಬಳ್ಳೊಳ್ಳಿ 210 ಬ್ಯಾಗ್ಸ್‌ಗೆ ಆವಕವಾಗಿದ್ದು, ಪ್ರತಿ ಬ್ಯಾಗ್ಸ್ 4000-10,000 ರೂ. ಹಾಗೂ ಅಲ್ಲಾ 5 ಕ್ವಿಂಟಾಲ್ ಆವಕವಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 5-10 ಸಾವಿರ ರೂ. ಮಾರಾಟವಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂಓದಿ:ಇಂದಿರಾ ಕ್ಯಾಂಟೀನ್​ನಲ್ಲಿ ಹೊರಗಡೆಯಿಂದ ಮಾಂಸ ತಂದು ತಿನ್ನಬಹುದು, ಆದರೆ ಪೂರೈಕೆ ಇಲ್ಲ: ಸಚಿವ ಮಹಾದೇವಪ್ಪ

Last Updated : Jun 17, 2023, 5:45 PM IST

ABOUT THE AUTHOR

...view details