ಮುದ್ದೇಬಿಹಾಳ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಚುನಾವಣೆಯ 'ಬಿ' ವರ್ಗದ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಎಂಟು ಸ್ಥಾನಗಳಲ್ಲಿ ಆರು ಜನ ಸದಸ್ಯರು ಬಿಜೆಪಿ ಬೆಂಬಲಿತರೇ ಆಯ್ಕೆಯಾಗುವ ಮೂಲಕ ಟಿಎಪಿಸಿಎಂಎಸ್‌ನಲ್ಲಿ ಬಿಜೆಪಿ ತನ್ನ ಹಿಡಿತ ಸಾಧಿಸಿದೆ.
ಪಟ್ಟಣದ ಏಪಿಎಂಸಿ ಆವರಣದಲ್ಲಿರುವ ಸಂಘದ ಕಛೇರಿಯಲ್ಲಿ ಶನಿವಾರ ನಾಮಪತ್ರ ತೆಗೆದುಕೊಳ್ಳಲು ಕಡೆಯ ದಿನವಾಗಿತ್ತು. ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳುವಂತೆ ತೀವ್ರ ಒತ್ತಡ, ಹಿರಿಯ ಮುಖಂಡರ ಮಾತಿಗೆ ಬೆಲೆ ನೀಡಿದ ಕೆಲವು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದು ಅವಿರೋಧ ಆಯ್ಕೆಗೆ ಸಹಕರಿಸಿದರು. ಸಾಮಾನ್ಯ ವರ್ಗದಿಂದ ಬಸರಕೋಡ ಕ್ಷೇತ್ರದ ಬಿಜೆಪಿ ಬೆಂಬಲಿತರಾದ ಮನೋಹರ ಸೋಮಪ್ಪ ಮೇಟಿ, ಕೊಣ್ಣೂರಿನ ಶಂಕರಗೌಡ ಭೀಮೇಶೆಪ್ಪ ಹಿಪ್ಪರಗಿ, ಮಹಿಳಾ ಮೀಸಲು ವರ್ಗದಿಂದ ಜಮ್ಮಲದಿನ್ನಿ ಕ್ಷೇತ್ರದ ಶ್ರೀದೇವಿ ಸುರೇಶ ಮಾಲಗತ್ತಿ, ಹಿಂದುಳಿದ ವರ್ಗ ಬಿ ಮೀಸಲು ವರ್ಗದಿಂದ ತಾರನಾಳ ಕ್ಷೇತ್ರದ ಪ್ರಭಾಕರ ಪರಪ್ಪ ಯಾಳವಾರ ಎಸ್ಸಿ ವರ್ಗದಿಂದ ಕೋಳೂರ ಎಲ್. ಟಿ. ಕ್ಷೇತ್ರದ ಚಿದಾನಂದ ಮಂಗಳಪ್ಪ ಸೀತಿಮನಿ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಕೊಣ್ಣೂರ ಕ್ಷೇತ್ರದ ಗುರಣ್ಣ ಭೀಮಣ್ಣ ಹತ್ತೂರ ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್‌ನಿಂದ ಮಹಿಳಾ ಮೀಸಲು ವರ್ಗದಿಂದ ಗುಂಡಕನಾಳದ ಚನ್ನಮ್ಮ ಸಾಹೇಬಗೌಡ ಲಕ್ಕುಂಡಿ, ಹಿಂದುಳಿದ ವರ್ಗ ಎ ಮೀಸಲು ವರ್ಗದಿಂದ ಮಸೂತಿಯ ಮುತ್ತಪ್ಪ ಕರಬಸಪ್ಪ ಮುತ್ತಣ್ಣವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ ಇಳಕಲ್ ಘೋಷಿಸಿದರು.
ಅಂತಿಮವಾಗಿ 22 ಜನ ಸದಸ್ಯರು ಕಣದಲ್ಲಿ ಉಳಿದಿದ್ದು, 14 ಜನ ತಮ್ಮ ಉಮೇದುವಾರಿಕೆ ವಾಪಸ್ಸು ಪಡೆದುಕೊಂಡರು. ಸಹಾಯಕ ಚುನಾವಣಾಧಿಕಾರಿಯಾಗಿ ಎಸ್. ಜಿ. ಕೂಡಗಿ, ಸಹಾಯಕ ವ್ಯವಸ್ಥಾಪಕ ಗುರುರಾಜ ಕೋನರೆಡ್ಡಿ, ಮಹಾಂತಗೌಡ ಪಾಟೀಲ, ಚಿನಿವಾರ ಮೊದಲಾದವರು ಇದ್ದರು.