ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರ 2ನೇ ದಿನದ ಪ್ರವಾಹಪೀಡಿತ ಪ್ರದೇಶಗಳ ಭೇಟಿಯ ಸಂದರ್ಭ ಸಂತ್ರಸ್ಥರು ಸಚಿವರ ಜತೆ ವಾಗ್ವಾದ ನಡೆಸಿದರು. ಮೊದಲು ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದ ಕೆರೆ ವೀಕ್ಷಣೆಗೆ ಆಗಮಿಸಿದ್ದ ಸ್ಥಳೀಯ ಶಾಸಕ ಸೋಮನಗೌಡ ಪಾಟೀಲ ಸಾಸನೂರಗೆ ಸಚಿವರೆದುರೇ ಯುವಕನೊಬ್ಬ ತರಾಟೆಗೆ ತೆಗೆದುಕೊಂಡ.
ಉಸ್ತುವಾರಿ ಸಚಿವ ಉಮೇಶ ಕತ್ತಿ ಡೋಣಿ ನದಿಗೆ ಪ್ರವಾಹ ಬಂದ ತಕ್ಷಣ ಸಾತಿಹಾಳ ಕೆರೆಗೆ ನೀರು ಬಿಟ್ಟಿದ್ದೀರಿ, ಇದೀಗ ಮಳೆಯಾಗಿ ಕೋಡಿ ಒಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆಯ ಪರಿಸ್ಥಿತಿ ಒಮ್ಮೆ ನೋಡಿ ಎಂದು ಯುವಕ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಸೋಮನಗೌಡ, ಮತ್ತೊಮ್ಮೆ ಬರುತ್ತೇನೆ ಎಂದಾಗ ಯುವಕ ಒಪ್ಪಲಿಲ್ಲ. ಮತ್ತೆ ಗರಂ ಆದಾಗ ಶಾಸಕ ಸೋಮನಗೌಡ, ನಾನು ನಿಮ್ಮೂರಿಗೆ ಸಾಕಷ್ಟು ಸಲ ಬಂದಿದ್ದೇನೆ, ನನ್ನ ಅವಧಿಯಲ್ಲೇ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಮಾಡಿದ್ದೀನಿ ಎಂದರು. ಇದಕ್ಕೆ ಕೋಪಗೊಂಡ ಯುವಕ, ನಿಮ್ಮ ಅವಧಿಯಲ್ಲಿ ಇದು ಆಗಿಲ್ಲ ಎಂದನು.
ಆತನನ್ನು ಸಮಾಧಾನಪಡಿಸಿದ ಗ್ರಾಮಸ್ಥರು ಡೋಣಿ ನದಿಗೆ ಪ್ರವಾಹ ಬಂದಾಗ ಈ ಕೆರೆಯ ಸುತ್ತಮುತ್ತಲಿನ ಗ್ರಾಮಗಳು ಜಲಾವೃತವಾಗುತ್ತವೆ. ಅದನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು. ಇದಕ್ಕೆ ಎರಡು ಎಕರೆ ಭೂಮಿ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸಚಿವ ಉಮೇಶ ಕತ್ತಿ, ಗ್ರಾಮಸ್ಥರು ಭೂಮಿ ನೀಡಲು ಮುಂದಾದರೆ ಅವರಿಗೆ ಸರ್ಕಾರ ನಿಯಮಾವಳಿಯಂತೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ನಂತರ ತಾಳಿಕೋಟೆಗೆ ಭೇಟಿ ನೀಡಿದ ಸಚಿವರು, ಪ್ರವಾಹಪೀಡಿತ ತಾಳಿಕೋಟೆ-ಮುದ್ದೇಬಿಹಾಳ ರಸ್ತೆಯ ಸೇತುವೆ ವೀಕ್ಷಿಸಿದರು. ಕಳೆದ 8 ತಿಂಗಳಿಂದ ಸಂಚಾರ ಸ್ಥಗಿತಗೊಂಡಿರುವ ಸೇತುವೆಯಿಂದ ಮುಕ್ತಿ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ತಕ್ಷಣ ಸೇತುವೆ ದುರಸ್ತಿಗೊಳಿಸಿ ಸಂಚಾರ ಮುಕ್ತಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದು, ಪ್ರವಾಸಿ ಮಂದಿರದಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದರು.
ಮುದ್ದೇಬಿಹಾಳಕ್ಕೆ ಭೇಟಿ ನೀಡಿದಾಗ, ಮಳೆಯಿಂದ ಮಾರುಕಟ್ಟೆಯಲ್ಲಿರುವ ಕೆಳಮಹಡಿಯ ಅಂಗಡಿಗೆ ನುಗ್ಗಿರುವ ನೀರು ವೀಕ್ಷಿಸಿ, ಇಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಮಾಡಿ ನೀರು ಹರಿಯುವಂತೆ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಾತಿಹಾಳದ ಕೆರೆಯಿಂದ ಬಾಧಿತವಾದ ಮೂರು ಹಳ್ಳಿಗಳನ್ನು ಈಗಾಗಲೇ ಸ್ಥಳಾಂತರ ಮಾಡಿ ಅವರಿಗೆ ಹಕ್ಕು ಪತ್ರ ಸಹ ವಿತರಿಸಲಾಗಿದೆ. ಆದರೂ ಸಹ ಗ್ರಾಮಸ್ಥರು ಸ್ಥಳಾಂತರ ಆಗಿಲ್ಲ. ಈಗಲೂ ಅವರಿಗೆ ಮನವಿ ಮಾಡಲಾಗುತ್ತಿದೆ. ಆದರೆ ಅವರು ಸ್ಥಳಾಂತರವಾಗದಿದ್ದರೆ ನಾನೇನು ಮಾಡಲಿ ಎಂದು ಅಸಹಾಯಕತೆ ತೊಡಿಕೊಂಡರು. ಇದರ ಜೊತೆಗೆ ತಾವು ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಸಲ್ಲಿಸಿರುವ ಬೇಡಿಕೆಗಳನ್ನು ಎರಡು ತಿಂಗಳೊಳಗಾಗಿ ಇತ್ಯರ್ಥ ಮಾಡಬೇಕೆಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಇದನ್ನೂ ಓದಿ:ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು : ನಡುಗಡ್ಡೆಯಲ್ಲಿ ಸಿಲುಕಿದ್ದ ರೈತರ ರಕ್ಷಣೆ