ವಿಜಯಪುರ: ನನ್ನ ನಸೀಬ್‌ನಲ್ಲಿ ಇದ್ದರೆ ನಾಳೆಯೇ ಸಿಎಂ ಹುದ್ದೆ ಒಲಿಯಬಹುದು. ಇಲ್ಲವೇ 15 ವರ್ಷದ ನಂತರವೂ ಅವಕಾಶ ಬರಬಹುದು. ಆದರೆ ಉತ್ತರ ಕರ್ನಾಟಕದ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅವರು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬಿಟ್ಟು ನಾನು ಸಿಎಂ ಆಗುವ ಆಕಾಂಕ್ಷಿಯಲ್ಲ ಎಂದು ಸಚಿವ ಉಮೇಶ ಕತ್ತಿ ಹೇಳಿದರು.
ಪ್ರವಾಹಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿದ ನಂತರ ವಿಜಯಪುರದಲ್ಲಿ ಮಾತನಾಡುತ್ತಾ, ಬಿಜೆಪಿಯಲ್ಲಿ ಮೂರನೇ ಸಿಎಂ ಅಭ್ಯರ್ಥಿಯಾಗಿ ಕತ್ತಿವರಸೆ ನಡೆದಿದೆ ಎಂಬ ಕಾಂಗ್ರೆಸ್ ಟ್ವೀಟ್ ಕುರಿತು ಪ್ರತಿಕ್ರಿಯಿಸಿ, ಮೊದಲು ಕಾಂಗ್ರೆಸ್ ಮುಖಂಡರು ನಡೆಸುವ ಆಲಿಂಗನ ಬಿಟ್ಟು ಪಕ್ಷ ಅಧಿಕಾರಕ್ಕೆ ತರಲು ಚಿಂತಿಸಲಿ. ಸಿಎಂ ಬೊಮ್ಮಾಯಿ ಅವಧಿಯವರೆಗೂ ಸಿಎಂ ಆಗಿರುತ್ತಾರೆ, ಅವರ ನೇತ್ವತ್ವದಲ್ಲಿಯೇ 2023 ಚುನಾವಣೆ ಎದುರಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದರು.
ಮಂಗಳೂರಿನಲ್ಲಿ ಪ್ರವೀಣ್ ಹತ್ಯೆಯಾಗಿರುವುದರಿಂದ ಸ್ವಲ್ಪ ತೊಂದರೆಯಾಗಿದೆ ನಿಜ. ಆದರೆ ಅದನ್ನು ಪಕ್ಷದ ವರಿಷ್ಠರು ಸರಿ ಪಡಿಸುತ್ತಾರೆ. ನಾನು 9 ಬಾರಿ ಶಾಸಕನಾಗಿ ಕಾರ್ಯನಿರ್ವಹಿಸಿದ್ದೇನೆ. ಸದ್ಯ ನಮ್ಮ ಪಕ್ಷ ನೀಡಿರುವ ಜವಾಬ್ದಾರಿಯಂತೆ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಯಾವುದೇ ಅಸಮಾಧಾನವಿಲ್ಲ:ಬಿಜೆಪಿ ಕೆಲ ಶಾಸಕರಲ್ಲಿ ಪಕ್ಷದ ಮೇಲೆ ಅಸಮಾಧಾನವಿದೆ ಎಂದು ಹೇಳಲಾಗುತ್ತದೆ ಎನ್ನುವ ಪ್ರಶ್ನೆಗೆ, ಯಾವ ಶಾಸಕರಿಗೂ, ಸಚಿವರಿಗೂ ಅಸಮಾಧಾನವಿಲ್ಲ. ಈ ಬಗ್ಗೆ ಎಲ್ಲಾದರೂ ಹೇಳಿಕೊಂಡಿದ್ದಾರಾ ಎಂದು ಮರು ಪ್ರಶ್ನಿಸಿದರು. ಅಮಿತ್ ಶಾ ಬೆಂಗಳೂರಿಗೆ ಬಂದಿದ್ದು ಡೈರಿ ಉದ್ಘಾಟನೆಗೆ ಅದುಬಿಟ್ಟರೆ ಯಾರಾದರೂ ಅಸಮಾಧಾನ ಅವರ ಬಳಿ ತೋಡಿಕೊಂಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ, ಇದು ಕೇವಲ ಮಾಧ್ಯಮ ಸೃಷ್ಟಿ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಕಾಲದಲ್ಲಿ ಚೀಫ್ ಮಿನಿಸ್ಟರ್, 'ಚೀಟಿ ಮಿನಿಸ್ಟರ್' ಆಗಿತ್ತು: ಸಚಿವ ಡಾ.ಕೆ.ಸುಧಾಕರ್