ವಿಜಯಪುರ :ವೈದ್ಯರಾಗುವ ಕನಸು ಹೊತ್ತು ಉಕ್ರೇನ್ ದೇಶಕ್ಕೆ ಹೋಗಿದ್ದ ವಿದ್ಯಾರ್ಥಿಗಳು ಈಗ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಉಕ್ರೇನ್ -ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಯುದ್ಧ ಭೂಮಿಯಿಂದ ಜೀವ ಉಳಿಸಿಕೊಂಡು ವಾಪಸ್ ತವರಿಗೆ ಬಂದು 6 ತಿಂಗಳು ಕಳೆದರೂ ವಿದ್ಯಾಭ್ಯಾಸ ಮುಂದುವರೆಸಲಾಗದೇ ವಿದ್ಯಾರ್ಥಿಗಳು ಚಿಂತೆಗೀಡಾಗಿದ್ದಾರೆ.
ಉಕ್ರೇನ್ ನಿಂದ ಪಾರಾದ ವೈದ್ಯಕೀಯ ವಿದ್ಯಾರ್ಥಿಗಳ ಬದುಕು ಅತಂತ್ರ : ಆತಂಕದಲ್ಲಿ ಪೋಷಕರು ಉಕ್ರೇನ್ ದೇಶಕ್ಕೆ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಭಾರತದಿಂದ ಸುಮಾರು 20 ಸಾವಿರ ವಿದ್ಯಾರ್ಥಿಗಳು ತೆರಳಿದ್ದರು. ಅದರಲ್ಲಿ ವಿಜಯಪುರ ಜಿಲ್ಲೆಯ 17 ವಿದ್ಯಾರ್ಥಿಗಳೂ ಇದ್ದರು. ಫೆಬ್ರವರಿಯಲ್ಲಿ ಯುದ್ಧ ಆರಂಭವಾದಾಗ ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಮೂಲಕ ಅವರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆ ತಂದಿತ್ತು. ಈ ವೇಳೆ ಮುಂದಿನ ವಿದ್ಯಾಭ್ಯಾಸ ಭಾರತದಲ್ಲಿ ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಆ ಭರವಸೆ ಮಾತ್ರ ಈಡೇರಿಲ್ಲ, ಹೀಗಾಗಿ ಕೆಲ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ವಿಜಯಪುರದ ಬಿಎಲ್ ಡಿಇ ವೈದ್ಯಕೀಯ ಕಾಲೇಜು ಕೆಲ ವಿದ್ಯಾರ್ಥಿಗಳಿಗೆ ಕಲಿಯಲು ಎಲ್ಲ ಸೌಕರ್ಯ ಮಾಡಿಕೊಟ್ಟಿತ್ತು. ಆದರೆ ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ನೀಡುವ ಅಧಿಕಾರವಿಲ್ಲದ ಕಾರಣ, ವಿದ್ಯಾರ್ಥಿಗಳ ಪರಿಸ್ಥಿತಿ ಅತಂತ್ರವಾಗಿದೆ. ಈಗಾಗಲೇ 6 ತಿಂಗಳು ಕಳೆದಿದ್ದು, ಯಾವುದೇ ವೈದ್ಯಕೀಯ ಕಾಲೇಜ್ ನಲ್ಲಿ ಸೀಟು ಇಲ್ಲದೇ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.
ಬದುಕು ಅತಂತ್ರ :ಇದರ ಜತೆ ಉಕ್ರೇನ್ ವೈದ್ಯಕೀಯ ಕಾಲೇಜುಗಳು ಭಾರತಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತೇವೆ. ಸ್ವಲ್ಪ ದಿನದಲ್ಲಿ ಕಾಲೇಜು ಆರಂಭಿಸುತ್ತೇವೆ. ಬಾಕಿ ಇರುವ ವೈದ್ಯಕೀಯ ಶುಲ್ಕವನ್ನು ಭರಿಸಬೇಕು ಎಂದು ಒತ್ತಡ ಹೇರುತ್ತಿದೆ. ಮೆಡಿಕಲ್ ಕೌನ್ಸಲಿಂಗ್ ಪ್ರಕಾರ ವೈದ್ಯಕೀಯ ವಿದ್ಯಾಭ್ಯಾಸ ಒಂದೇ ಕಾಲೇಜಿನಲ್ಲಿ ಪೂರ್ಣಗೊಳಿಸಬೇಕು ಎಂಬ ನಿಯಮ ಇರುವ ಕಾರಣ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪಾಲಕರಿಗೆ ಚಿಂತೆ ಎದುರಾಗಿದೆ. ಎಲ್ಲ ಮೂಲ ಅಂಕಪಟ್ಟಿ ಉಕ್ರೇನ್ ಕಾಲೇಜಿನಲ್ಲಿಯೇ ಇರುವುದರಿಂದ ದಾಖಲೆಗಳು ಬೇಕೆಂದರೆ 4.50ಲಕ್ಷ ರೂ. ಶುಲ್ಕ ಕಟ್ಟಬೇಕು, ಇಲ್ಲವಾದರೆ ಸರ್ಟಿಫಿಕೇಟ್ ನೀಡುವುದಿಲ್ಲ ಎಂದು ಉಕ್ರೇನ್ ಕಾಲೇಜು ಆಡಳಿತ ಮಂಡಳಿ ಸೂಚಿಸಿದೆ ಎಂದು ಪಾಲಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಉಕ್ರೇನ್ ಹಾಗೂ ರಷ್ಯಾ ಯುದ್ಧ ಆರಂಭವಾಗಿ 6 ತಿಂಗಳು ಕಳೆದರೂ ಭಾರತ ಸರ್ಕಾರ ಯಾವುದೇ ದೇಶದ ಬೆಂಬಲಕ್ಕೆ ನಿಲ್ಲದಿರುವ ಕಾರಣ ರಾಜತಾಂತ್ರಿಕ ಸಮಸ್ಯೆ ಎದುರಾಗಿದೆ. ಉಕ್ರೇನ್ ಸರ್ಕಾರ ಇನ್ಮುಂದೆ ಭಾರತೀಯ ವೈದ್ಯ ವಿದ್ಯಾರ್ಥಿಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತದೆ ಎನ್ನುವ ಭಯವೂ ಪೋಷಕರನ್ನು ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಯುದ್ಧ ನಿಂತರೂ ತಮ್ಮ ಮಕ್ಕಳನ್ನು ಉಕ್ರೇನ್ಗೆ ಕಳುಹಿಸಲು ಪಾಲಕರಿಗೆ ಆತಂಕ ಎದುರಾಗಿದೆ. ಈಗ ಕೇಂದ್ರ ಸರ್ಕಾರ ತಾನು ನೀಡಿದ ಭರವಸೆ ಈಡೇರಿಸಲು ಮನಸ್ಸು ಮಾಡಿದರೆ ಈ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಪೋಷಕರು ಹೇಳಿದ್ದಾರೆ. ಅಲ್ಲದೆ, ತಮ್ಮ ಮಕ್ಕಳ ಭವಿಷ್ಯದ ಮುಂದಿನ ದಾರಿ ಕಂಡುಕೊಳ್ಳಲು ಸೂಕ್ತವ ವ್ಯವಸ್ಥೆ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪಾಲಕರು ಮನವಿ ಮಾಡಿದ್ದಾರೆ.
ಓದಿ :ಸಿಂಗಾಪುರ ಓಪನ್: ಚೀನಾದ ವಾಂಗ್ ಸೋಲಿಸಿದ ಪಿ.ವಿ.ಸಿಂಧು ಚಾಂಪಿಯನ್