ಮುದ್ದೇಬಿಹಾಳ: ಇಂದು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿರುವ ಇಬ್ಬರು ಪರೀಕ್ಷಾರ್ಥಿಗಳಿಗೆ 12 ಜನ ಸಿಬ್ಬಂದಿ ಕಾರ್ಯ ನಿರ್ವಹಿಸಿದ ಪ್ರಸಂಗ ಪಟ್ಟಣದ ಎಂ.ಜಿ.ವಿ.ಸಿ ಪರೀಕ್ಷಾ ಕೇಂದ್ರದಲ್ಲಿ ಕಂಡುಬಂದಿತು.
2021ನೇ ಸಾಲಿನಲ್ಲಿ ಕೋವಿಡ್ ಕಾರಣ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರ್ಯಾಯ ಮೌಲ್ಯಮಾಪನ ಮಾನದಂಡಗಳ ಆಧಾರದಲ್ಲಿ ಪಾಸ್ ಮಾಡಲಾಗಿತ್ತು. ಪ್ರಸ್ತುತ ಈ ಫಲಿತಾಂಶದಿಂದ ತೃಪ್ತರಾಗದ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಆಗಸ್ಟ್ 19 ರಿಂದ ಸೆಪ್ಟೆಂಬರ್ 03 ರವರೆಗೆ ಪರೀಕ್ಷೆ ನಡೆಸುತ್ತಿದೆ.
ಇಂದು ಮುದ್ದೇಬಿಹಾಳದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಣಿತ ವಿಷಯದ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಪಟ್ಟಣದ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನ ಶಾಹೀನ್ ನಾಯ್ಕೋಡಿ ಹಾಗೂ ನಾಗರಬೆಟ್ಟದ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನ ಅಸ್ಪಾಕ್ ಗುಂದಗಿ ಪರೀಕ್ಷೆಗೆ ಹಾಜರಾಗಿದ್ದರು.
ಇವರ ಪರೀಕ್ಷಾ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ತಹಶೀಲ್ದಾರ್, ಬಿಇಒ, ಪ್ರಾಚಾರ್ಯರು, ಮುಖ್ಯ ಅಧೀಕ್ಷಕರು, ಸಹ ಮುಖ್ಯ ಜಾಗೃತ ದಳದ ಸದಸ್ಯ, ಉತ್ತರ ಪತ್ರಿಕೆ ಪಾಲಕರು, ಕಚೇರಿ ಸೂಪರಿಂಡೆಂಟ್, ಅಟೆಂಡರ್, ಇಬ್ಬರು ಕೊಠಡಿ ಮೇಲ್ವಿಚಾರಕರು, ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು12 ಜನ ಸೇವೆ ಸಲ್ಲಿಸಿದರು.