ವಿಜಯಪುರ : ಕಳ್ಳರು 10 ಶ್ರೀಗಂಧದ ಮರಗಳನ್ನು ಕತ್ತರಿಸಿ ಎರಡು ಶ್ರೀಗಂಧದ ಮರಗಳನ್ನು ಕಳ್ಳತನಗೈದು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಎಸ್‌ಬಿಐ ಬ್ಯಾಂಕ್ ಬಳಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಶ್ರೀಶೈಲ ಜಾಲಗೇರಿ, ಈರಪ್ಪ ಕಂದಗಲ ಎನ್ನುವವರ ವಿರುದ್ಧ ಕೇಸ್ ದಾಖಲಾಗಿದೆ.
ಇನ್ನು, ಜಮೀನಿನಲ್ಲಿದ್ದ 10 ಶ್ರೀಗಂಧದ ಮರಗಳನ್ನು ಕತ್ತರಿಸಿ ಎರಡು ಮರಗಳು ದೋಚಿಕೊಂಡು ಪರಾರಿ ಆಗಿದ್ದಾರೆ ಎಂದು ದೂರಿನಲ್ಲಿ ನಮೂದಿಸಲಾಗಿದೆ. ಸುಮಾರು 75 ಸಾವಿರ ಹಾನಿಯಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಂದಗಿಯಲ್ಲಿ 30 ಟನ್ ಪಡಿತರ ಅಕ್ಕಿ ವಶ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರದೇಶದ ಮೇಲೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ, 30 ಟನ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಕಾಂತಪ್ಪ ಭೂಸನೂರ ಅವರ ತೋಟದಲ್ಲಿ ಅಕ್ರಮವಾಗಿ 30 ಟನ್ ಪಡಿತರ ಅಕ್ಕಿ ಸಂಗ್ರಹ ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ 30 ಟನ್ ಅಕ್ಕಿ ಹಾಗೂ 2 ಲೋಡ್ ಅಕ್ಕಿ ಹೊಂದಿದ್ದ ವಾಹನ ಜಪ್ತಿ ಮಾಡಲಾಗಿದೆ. ದಾಳಿಯಲ್ಲಿ ಆಲಮೇಲ ಪಿಎಸ್‌ಐ ಮತ್ತಿತರರು ಭಾಗಿಯಾಗಿದ್ದರು ಎಂಬುದು ತಿಳಿದುಬಂದಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣ ಶ್ರೀಗಂಧ ಮರಗಳ್ಳರ ಬಂಧನ (ಪ್ರತ್ಯೇಕ ಘಟನೆ): ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆಯ ಮೂಲಕ ಬೀದರ್ ಜಿಲ್ಲೆಯಲ್ಲಿ ವಿವಿಧ ಠಾಣೆಗಳಲ್ಲಿ ಮತ್ತು ಅರಣ್ಯ ಇಲಾಖೆಯಲ್ಲಿ ದಾಖಲಾದ ಶ್ರೀಗಂಧ ಮರಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು (ಜುಲೈ 31-2023) ಬಂಧಿಸಲಾಗಿತ್ತು. ಆರೋಪಿಗಳಿಂದ 8,75,000 ರೂ. ಮೌಲ್ಯದ ವಿವಿಧ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್. ಎಲ್ ತಿಳಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಅವರು, ಭಾಲ್ಕಿ ಅಂಬೆಸಾಂಗಾವಿ ಗ್ರಾಮದ ಸೂರಜಸಿಂಗ್ ಕನ್ನುಸಿಂಗ್ ರಾಜಪೂತ ಎನ್ನುವರ ಜಮೀನಿನಲ್ಲಿ ಶ್ರೀಗಂಧ ಮರಗಳ ಕಳ್ಳತನ ಸೇರಿದಂತೆ ಎರಡು ಪ್ರಕರಣ ಹಾಗೂ ಬೀದರ್ ಜಿಲ್ಲಾ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಕಳ್ಳತನವಾದ ಮೂರು ಶ್ರೀಗಂಧ ಮರಗಳ ಕಳ್ಳತನ ಪ್ರಕರಣದಲ್ಲಿ ಈ ಆರೋಪಿಗಳು ಭಾಗಿಯಾಗಿದ್ದರು. ಬಂಧಿತರಿಂದ 5 ಲಕ್ಷ ರೂ. ಮೌಲ್ಯದ ಕಾರ್ 45,000 ರೂ. ಮೌಲ್ಯದ ಬೈಕ್ ಹಾಗೂ ಗರಗಸ, ಮೂರು ಮೊಬೈಲ್ ಸೇರಿದಂತೆ ಒಟ್ಟು 8,75,000 ರೂ. ಮೌಲ್ಯದ ವಿವಿಧ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದರು.
ಇದನ್ನೂ ಓದಿ:ಪೊಲೀಸ್, ಅರಣ್ಯ ಇಲಾಖೆಯಿಂದ ಜಂಟಿ ಕಾರ್ಯಾಚರಣೆ: ಶ್ರೀಗಂಧ ಮರಗಳ್ಳರ ಬಂಧನ, 8.75 ಲಕ್ಷ ರೂ. ಮೌಲ್ಯದ ವಿವಿಧ ಸ್ವತ್ತುಗಳ ಜಪ್ತಿ