ವಿಜಯಪುರ : ಕೋವಿಡ್-19 ರೋಗದ ಹಿನ್ನೆಲೆಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲು ಜಿಲ್ಲೆಯಲ್ಲಿ ಈಗಾಗಲೇ ಲ್ಯಾಬ್ ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ ಮತ್ತೆ ಎರಡು ಹೊಸ ಯಂತ್ರಗಳು ಜಿಲ್ಲೆಗೆ ಬಂದಿರುವುದರಿಂದ ಹೆಚ್ಚಿನ ಮಟ್ಟದಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡುವಲ್ಲಿ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯ ಸಿ.ಬಿ ನ್ಯಾಟ್ ಲ್ಯಾಬ್‍ಗೆ ಮತ್ತೆ ಎರಡು ಹೊಸ ಟ್ರ್ಯೂ ನ್ಯಾಟ್ ಯಂತ್ರಗಳ ಸೇರ್ಪಡೆಯಿಂದ ತುರ್ತು ಸಂದರ್ಭದಲ್ಲಿ ಪರೀಕ್ಷೆ ಕೈಗೊಳ್ಳಲು ಸಹಕಾರಿಯಾಗಿದ್ದು ಗರ್ಭಿಣಿ, ಐ.ಎಲ್.ಐ.ಗಳಂತಹ ಪ್ರಕರಣಗಳ ತುರ್ತು ಸಂದರ್ಭಗಳಲ್ಲಿ ಬಹಳಷ್ಟು ಉಪಯೋಗವಾಗಲಿದೆ. ಬೆಂಗಳೂರು, ಕಲಬುರಗಿಗೆ ಗಂಟಲು ದ್ರವ ಮಾದರಿ ಕಳಿಸುವುದು ಕಡಿಮೆಯಾಗಲಿದ್ದು ಜಿಲ್ಲೆಯಲ್ಲಿಯೇ ಒಂದು ದಿನಕ್ಕೆ 24 ರಿಂದ 50 ರಷ್ಟು ಗಂಟಲು ದ್ರವ ಮಾದರಿ ಪರೀಕ್ಷೆಯನ್ನು ಮಾಡುವಷ್ಟು ಸಾಮರ್ಥ್ಯವನ್ನು ಲ್ಯಾಬ್ ಪಡೆದುಕೊಂಡಿದೆ ಎಂದು ಹೇಳಿದರು.
ಗೋವಾ ರಾಜ್ಯದಿಂದ ಬರುವವರಿಗೆ ಹೋಂ ಕ್ವಾರಂಟೈನ್ ಹಾಗೂ ಇತರೆ ರಾಜ್ಯಗಳಿಂದ ಆಗಮಿಸುತ್ತಿರುವ ಜನರಿಗೆ ಜಿಲ್ಲಾಡಳಿತದಿಂದ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದ್ದೆ. ಹೊರ ರಾಜ್ಯದಿಂದ ಬಂದವರು ಸೋಂಕಿತರು ಅಥವಾ ಶಂಕಿತರು ಎಂದು ಹೇಳುವುದು ಕಷ್ಟ. ನಾನಾ ಕಾರಣಗಳಿಂದ ಅನ್ಯ ರಾಜ್ಯಗಳಿಗೆ ದುಡಿಯಲು ಹೋದವರು ಮರಳಿ ತಮ್ಮ ಊರುಗಳಿಗೆ ಬಂದಿದ್ದಾರೆ. ಅವರನ್ನು ತಮ್ಮ ತಮ್ಮ ಊರುಗಳಲ್ಲಿ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದ್ದು, ಸಾರ್ವಜನಿಕರು ಸಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಾಂಸ್ಥಿಕ ಕ್ವಾರಂಟೈನ್ ಆದವರಿಗೆ ಜಿಲ್ಲಾಡಳಿತದ ವತಿಯಿಂದ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಆಹಾರ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತಿದೆ. ಕ್ವಾರಂಟೈನ್ ಆದ ವ್ಯಕ್ತಿಗಳು ಹೊರಗೆ ಹೋಗುವುದಾಗಲಿ, ತಮ್ಮ ಮನೆಗಳಿಗೆ ಹೋಗುವುದಾಗಲಿ ಮಾಡುವಂತಿಲ್ಲ. ಅಂತವರು ಕಂಡುಬಂದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತಿಳಿಸಬೇಕು. ಕೋವಿಡ್-19 ನಿಯಂತ್ರಣಕ್ಕಾಗಿ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದಾಗಿ, ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ತೆರಳುವವರಿಗೆ ಸೇವಾ ಸಿಂಧು ಜಾಲತಾಣದ ಮೂಲಕ ನೋಂದಣಿ ಮಾಡಿ ಬೇರೆ ರಾಜ್ಯಗಳಿಗೆ ತೆರಳಬಹುದಾಗಿದೆ.
ಹೊರ ರಾಜ್ಯಗಳಿಂದ ಜಿಲ್ಲೆಗೆ ಯಾರಾದರು ಮಾಹಿತಿ ಇಲ್ಲದೇ ಆಗಮಿಸಿದ್ದರೆ ಅಂಥವರ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.