ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ: ಕಲುಷಿತ ನೀರು ಸೇವಿಸಿ ಇಬ್ಬರ ಸಾವು

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಇಬ್ಬರು ಸಾವನ್ನಪ್ಪಿದ್ದಾರೆ.

By

Published : Oct 24, 2021, 3:15 PM IST

two die after drinking  contaminated water
ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ

ಮುದ್ದೇಬಿಹಾಳ/ವಿಜಯಪುರ:ಕಲುಷಿತ ನೀರು ಕುಡಿದು ಇಬ್ಬರು ಸಾವನ್ನಪ್ಪಿ, ನಾಲ್ವರು ಅಸ್ವಸ್ಥಗೊಂಡ ಘಟನೆ ಮುದ್ದೇಬಿಹಾಳ ತಾಲೂಕಿನ ಆಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗಲ್ ಗ್ರಾಮದಲ್ಲಿ ನಡೆದಿದೆ. ಕುಡಿಯುವ ನೀರಿಗೆ ಚರಂಡಿ ನೀರು ಸೇರ್ಪಡೆ ಆಗಿದ್ದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಕಳೆದ ಎರಡು ದಿನಗಳಿಂದ ಈ ಸಮಸ್ಯೆ ಉಲ್ಬಣವಾಗಿದೆ. ಯರಗಲ್ ಗ್ರಾಮದ ಗುರುರಾಜ್ ಬಸವರಾಜ ಮಳಗಿ(15) ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರೆ, ಭಾನುವಾರ ನೀಲಮ್ಮ ನಾರಾಯಣಪ್ಪ ಬೆನಕಣ್ಣವರ(65) ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಇದೇ ನೀರು ಕುಡಿದು ಇನ್ನೂ ನಾಲ್ವರು ಅಸ್ವಸ್ಥತೆಯಿಂದ ಬಳಲುತ್ತಿದ್ದು, ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಊರಿಗೆ ಮರಳಿದ್ದಾರೆ. ಕುಡಿವ ನೀರು ಪೂರೈಸುವ ನಲ್ಲಿಗೆ ಕೊಳಚೆ ನೀರು ಸೇರಿ ಕಲುಷಿತ ನೀರು ಪೂರೈಕೆಯಾಗಿ ಸಾವು ಸಂಭವಿಸಿದ್ದರೂ ತಾಲೂಕು ಆಡಳಿತ ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಈ ಘಟನೆಯ ಬಗ್ಗೆ ಮಾಹಿತಿಯೇ ಇಲ್ಲವೆಂದು ಹೇಳಿದ್ದಾರೆ.

ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ ವೃದ್ಧೆ

ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ:

ಯರಗಲ್ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಎಂ.ಎಸ್.ಪಾಟೀಲ ನೇತೃತ್ವದ ಆರೋಗ್ಯ ಇಲಾಖೆಯ ತಂಡದಿಂದ ಗ್ರಾಮಸ್ಥರ ಆರೋಗ್ಯವನ್ನು ತಪಾಸಣೆ ಮಾಡಿದ್ದು, ಮುಂಜಾಗ್ರತಾ ಕ್ರಮವಾಗಿ ಮಾತ್ರೆಗಳನ್ನು ವಿತರಿಸಲಾಗಿದೆ.

ಮನೆ ಮನೆಗೂ ನಲ್ಲಿ ನೀರು ಕೊಡುವ ಯೋಜನೆಯ ಅಸಮರ್ಪಕ ಜಾರಿಯೇ ಈ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದೆ. ನಲ್ಲಿ ಸಂಪರ್ಕ ಕೊಡದೇ ಹಾಗೆ ಬಿಟ್ಟು ಹೋಗಿದ್ದರಿಂದ ಗ್ರಾಮಸ್ಥರು ತಾವೇ ಅಲ್ಲಲ್ಲಿ ನಲ್ಲಿ ಸಂಪರ್ಕ ಪಡೆದುಕೊಂಡಿದ್ದಾರೆ. ಈ ಪೈಪ್​​ನಲ್ಲಿ ಚರಂಡಿ ನೀರು ಸೇರಿ ಕಲುಷಿತಗೊಂಡು ಅದನ್ನೇ ಗ್ರಾಮದ ನಿವಾಸಿಗಳು ಸೇವಿಸಿದ್ದು ಈ ದುರ್ಘಟನೆಗೆ ಕಾರಣವಾಗಿದೆ.

ಪಿಡಿಓ ನಿರ್ಲಕ್ಷ್ಯ:

ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ದರೂ ಗ್ರಾಪಂ ಪಿಡಿಓ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಘಟನೆಯ ಗಂಭೀರತೆ ಇನ್ನೂ ಅರ್ಥವಾಗಿಲ್ಲ. ಈ ಬಗ್ಗೆ ಗ್ರಾಮಸ್ಥರಿಗೆ ಅಗತ್ಯ ಜಾಗೃತಿ ಮೂಡಿಸುವ ಕಾರ್ಯವನ್ನು ಪಂಚಾಯಿತಿಯಿಂದ ಮಾಡಿಲ್ಲ ಎಂಬ ಆರೋಪಗಳು ಗ್ರಾಮಸ್ಥರಿಂದ ಕೇಳಿ ಬಂದಿವೆ.

ABOUT THE AUTHOR

...view details