ವಿಜಯಪುರ :ನಗರದ ರಾಜಧಾನಿ ಹೋಟೆಲ್ನ ರೂಮ್‌ನಲ್ಲಿ ಅನುಮಾನಸ್ಪದವಾಗಿ ಎರಡು ಶವ ಪತ್ತೆಯಾಗಿವೆ. ಬಳ್ಳಾರಿ ಮೂಲದ ಸಿ ಇಂದ್ರಕುಮಾರ ಹಾಗೂ ಮತ್ತೋರ್ವನ ಶವ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನ ಮೂಡಿಸಿದೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೃಷ್ಣಪುರ ತಾಂಡಾ ನಿವಾಸಿ ಸಿ ಇಂದ್ರಕುಮಾರ ಎಂಬಾತನನ್ನು ಜೊತೆಗಿದ್ದ ಯುವಕ ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಆತ್ಮಹತ್ಯೆಗೆ ಶರಣಾದವನ ಹೆಸರು ತಿಳಿದುಬಂದಿಲ್ಲ.
ರಾಜಧಾನಿ ಲಾಡ್ಜ್ ರೂಮ್ ನಂಬರ್ 114 ರಲ್ಲಿ ಎರಡು ಶವಗಳು ಹತ್ತಿರ ಹತ್ತಿರವಾಗಿ ಬಿದ್ದಿರುವುದು ಪತ್ತೆಯಾಗಿದೆ. ಇಂದ್ರಕುಮಾರ ಎಂಬುವರು ಇದೇ ಮಾರ್ಚ್ 22ರಂದು ಲಾಡ್ಜ್ಗೆ ಆಗಮಿಸಿ ಆಧಾರ್ ಕಾರ್ಡ್ ತೋರಿಸಿ ರೂಮ್ ನಂ 114 ಪಡೆದುಕೊಂಡಿದ್ದರು. ನಂತರ ಇವರ ರೂಮ್ಗೆ ಇನ್ನೊಬ್ಬ ವ್ಯಕ್ತಿ ಯಾವಾಗ ಬಂದಿದ್ದಾನೆ ಎನ್ನುವುದು ಸ್ವತಃ ಲಾಡ್ಜ್ ಸಿಬ್ಬಂದಿ ಹಾಗೂ ಮಾಲೀಕರಿಗೂ ಗೊತ್ತಾಗಿಲ್ಲ. ಎರಡು ದಿನ ರೂಮ್ ಬಾಗಿಲು ಸಹ ತೆರೆದಿರಲಿಲ್ಲ ಎಂಬುದು ತಿಳಿದುಬಂದಿದೆ.
ಈ ಬಗ್ಗೆ ಎಸ್ಪಿ ಆನಂದಕುಮಾರ್ ಅವರು ಪ್ರತಿಕ್ರಿಯಿಸಿದ್ದು, ರಾಜಧಾನಿ ಹೋಟೆಲ್ನಲ್ಲಿ ಇಬ್ಬರು ಯುವಕರ ಸಾವು ನಡೆದಿದೆ. ರೂಮ್ ನಂಬರ್ 114 ರಲ್ಲಿ ಒಬ್ಬರ ಮೇಲೆ ಒಬ್ಬರು ಇದ್ದಂತಹ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿವೆ. ಇದರಲ್ಲಿ ಮೇಲಿನ ವ್ಯಕ್ತಿ ಇನ್ನೊಬ್ಬನನ್ನು ಕಟ್ಟರ್ನಿಂದ ಸೀಳಿ ತದನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವಂತಹ ಅನುಮಾನ ಕಂಡುಬರುತ್ತಿದೆ. ಸದ್ಯ ಒಬ್ಬ ವ್ಯಕ್ತಿಯ ಹೆಸರು ಇಂದ್ರಕುಮಾರ್ ಎಂಬುದು ತಿಳಿದುಬಂದಿದೆ. ಹೋಟೆಲ್ ಬುಕ್ ಮಾಡಿಕೊಳ್ಳುವ ವೇಳೆ ಆಧಾರ್ ಕಾರ್ಡ್ ತೋರಿಸಿ ಇಂದ್ರಕುಮಾರ್ ಎಂದು ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಐಡೆಂಟಿಫಿಕೇಷನ್ ಮಾಡಬೇಕಾಗಿದೆ. ಇಂದ್ರಕುಮಾರ್ ಎಂಬಾತ ಹಗರಿಬೊಮ್ಮನಹಳ್ಳಿ ತಾಲೂಕಿನ ಕೃಷ್ಣಪುರ ತಾಂಡಾ ನಿವಾಸಿ ಎಂಬುದು ಗೊತ್ತಾಗಿದೆ ಎಂದರು.
ಆ ದ್ವಿಚಕ್ರ ವಾಹನದ ನಂಬರ್ ಅನ್ನು ನೋಡಲಾಗಿ ಅದು ಅರಕೆರೆ ತಾಂಡಾದ ಒಂದು ವ್ಯಕ್ತಿಯ ಹೆಸರಿನಲ್ಲಿ ರಿಜಿಸ್ಟ್ರೇಷನ್ ಆಗಿದೆ. ಈಗ ನಾವು ವೈಜ್ಞಾನಿಕವಾಗಿ ಯಾವೆಲ್ಲಾ ಮಾಹಿತಿಯನ್ನು ಕಲೆಕ್ಟ್ ಮಾಡಬೇಕೋ ಅದನ್ನು ನಾವು ಮಾಡುತ್ತಿದ್ದೇವೆ. ಈಗಾಗಲೆ ಸ್ಥಳಕ್ಕೆ ಶ್ವಾನಗಳು, ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಇದು ಮೇಲ್ನೋಟಕ್ಕೆ ಒಬ್ಬ ಇನ್ನೊಬ್ಬರನ್ನು ಕೊಂದು ತಾನೂ ಕೂಡಾ ಆತ್ಮಹತ್ಯೆ ಮಾಡಿಕೊಂಡಿರುವಂತೆ ಈಗ ಕಂಡುಬರುತ್ತಿದೆ ಎಂದು ತಿಳಿಸಿದರು.