ಮುದ್ದೇಬಿಹಾಳ(ವಿಜಯಪುರ): ಪಟ್ಟಣದಲ್ಲಿ ಡಬ್ಬಾ ಅಂಗಡಿಯನ್ನು ಹಾಕಲು ಮುಂದಾಗುತ್ತಿದ್ದ ಇಬ್ಬರನ್ನು ಪೊಲೀಸರು ವಿನಾಕಾರಣ ವಶಕ್ಕೆ ತೆಗೆದುಕೊಂಡು ಬಂಧನದಲ್ಲಿರಿಸಿದ್ದಾರೆ ಎಂದು ಆರೋಪಿಸಿದ ಮಾಜಿ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕೆಲವು ಪುರಸಭೆ ಸದಸ್ಯರು ಹಾಗೂ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಸಿಪಿಐ ಹಾಗೂ ಪಿಎಸ್ಐ ವಿರುದ್ಧ ಹರಿಹಾಯ್ದ ಘಟನೆ ಶನಿವಾರ ರಾತ್ರಿ ನಡೆದಿದೆ.
ಆಗಿದ್ದೇನು?: ಪಟ್ಟಣದ ಮಹಾಂತೇಶ ನಗರದ ಹುಡ್ಕೋಗೆ ಹೋಗುವ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಎದುರಿಗೆ ಇರುವ ಬೆಂಗಳೂರು ಬೇಕರಿ ಅಂಗಡಿ ಪಕ್ಕದಲ್ಲಿ ಖಾಸಗಿ ವ್ಯಕ್ತಿಗಳು ಹಾಕುತ್ತಿದ್ದ ಶೆಡ್ ವಿಷಯವಾಗಿ ಜಾಗದ ಮಾಲೀಕ ಹಾಗೂ ಶೆಡ್ ಹಾಕುವವರು, ಅಂಗಡಿಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಸಿಪಿಐ ಆನಂದ ವಾಘಮೋಡೆ ಅವರು ಇಬ್ಬರು ಯುವಕರನ್ನು ಠಾಣೆಗೆ ಕರೆತಂದು ಬಂಧನದಲ್ಲಿರಿಸಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಠಾಣೆಗೆ ಆಗಮಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಸದಸ್ಯ ವೀರೇಶ ಹಡಲಗೇರಿ, ಮಹೆಬೂಬ ಗೊಳಸಂಗಿ ಮೊದಲಾದವರು ದಿಢೀರ್ ಠಾಣೆಯ ಎದುರಿಗೆ ಪ್ರತಿಭಟನೆಗೆ ಮುಂದಾದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿ, ಯುವಕರಾದ ಮುತ್ತು ಢವಳಗಿ ಮತ್ತು ಅಶೋಕ ಪಾಟೀಲ ಎನ್ನುವ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬೆಳಗ್ಗೆಯಿಂದ ಠಾಣೆಯಲ್ಲಿ ಇಟ್ಟುಕೊಂಡಿದ್ದಾರೆ. ಯಾವುದೇ ದೂರು ಇಲ್ಲದಿದ್ದರೂ ಇವರನ್ನು ಕರೆತಂದಿಟ್ಟುಕೊಂಡಿರುವುದು ಕಾನೂನು ಬಾಹಿರವಾಗಿದೆ. ಈ ಬಗ್ಗೆ ಕೇಳಿದರೆ ಅವರಿಬ್ಬರೂ ಯಾವುದೋ ಅಧಿಕಾರಿಗೆ ಬೈದಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಹೇಳಿದ್ದರಿಂದ ಠಾಣೆಗೆ ಕರೆತಂದಿದ್ದೇವೆ ಎನ್ನುತ್ತಾರೆ.
ಮುಖ್ಯಾಧಿಕಾರಿಯನ್ನು ಕೇಳಿದರೆ ನಾನು ವಿಜಯಪುರದಲ್ಲಿದ್ದು ನನಗೇನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಒಂದು ವೇಳೆ ಇವರಿಬ್ಬರ ವಿರುದ್ಧ ಎಫ್‌ಐಆರ್ ಆಗಿದ್ದರೆ ಅವರನ್ನು ಜೈಲಿಗೆ ಕಳಿಸಲಿ, ನಮ್ಮದೇನೂ ತಕರಾರು ಇಲ್ಲ. ಆದರೆ ಯಾವುದೇ ದೂರು ಇಲ್ಲದೆ ಠಾಣೆಗೆ ಕರೆತಂದಿರುವುದು ತಪ್ಪು. ಅವರನ್ನು ಬಿಟ್ಟು ಕಳಿಸದಿದ್ದರೆ ಠಾಣೆಯ ಮುಂದೆಯೇ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.