ವಿಜಯಪುರ:ಮಹಾನಗರ ಪಾಲಿಕೆ ಆಯುಕ್ತ ವಿಜಯ ಮಕ್ಕಳಕಿ ಮೇಲೆ ಹಲ್ಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಬಂಧಿತನಾಗಿರುವ ಸಮರ್ಥ ಸಿಂದಗಿ ತಾಯಿ ಹಾಗೂ ಜೆಡಿಎಸ್ ಮುಖಂಡೆ ಸ್ನೇಹಲತಾ, ಇದರಲ್ಲಿ ತಮ್ಮ ಮಗನ ಪಾತ್ರ ಏನು ಇಲ್ಲ ನಮ್ಮ ಮನೆಯ ಕೆಲಸ ಮಾಡುವ ಸುರೇಶ ಓಡಿಸುತ್ತಿದ್ದ ಬೈಕ್ ಆಯುಕ್ತರ ಸ್ವಂತ ಕಾರಿಗೆ ಡಿಕ್ಕಿ ಹೊಡೆದಿದೆ. ಇದೇ ನೆಪ ಇಟ್ಟುಕೊಂಡು ಆತನ ಮೇಲೆ ಆಯುಕ್ತರು ಹಾಗೂ ಅವರ ಪತ್ನಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರೇಶ ನಡೆದ ಘಟನೆಯನ್ನು ತಮ್ಮ ಪುತ್ರ ಸಮರ್ಥಗೆ ತಿಳಿಸಿದ್ದಾನೆ. ಆತ ಘಟನಾ ಸ್ಥಳಕ್ಕೆ ಹೋದಾಗ ಮಾತಿಗೆ ಮಾತು ಬೆಳೆದಿರಬಹುದು. ನಂತರ ಪೊಲೀಸರು ಸಮರ್ಥನನ್ನು ಕರೆದುಕೊಂಡು ಆದರ್ಶನಗರ ಪೊಲೀಸ್ ಠಾಣೆಗೆ ತೆರಳಿದಾಗ, ಆಯುಕ್ತರು ಠಾಣೆಯಲ್ಲಿ ತಮ್ಮ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಸಮರ್ಥ ಹಾಗೂ ಇನ್ನೂ ನಾಲ್ಕೇದು ಜನರ ಮೇಲೆ ಎಫ್ಐಆರ್ ದಾಖಲಿಸಿ ಸಮರ್ಥನನ್ನು ಬಂಧಿಸಿದ್ದಾರೆ ಎಂದು ದೂರಿದರು.
ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಕುಟುಂಬ ಸದಸ್ಯರ ಜತೆ ಸ್ವಂತ ಕಾರಿನಲ್ಲಿ ಬಂದಿದ್ದಾರೆ. ಆದರೆ, ಮಾಧ್ಯಮದ ಎದುರು ತಾವು ರಸ್ತೆ ಕಾಮಗಾರಿ ವೀಕ್ಷಿಸಲು ಬಂದಿರುವುದಾಗಿ ತಿಳಿಸಿದ್ದಾರೆ. ಹಲ್ಲೆ ಮಾಡಿದ್ದಾರೆ ಎನ್ನಲಾದ ಯುವಕರಿಗೆ ಇವರು ಆಯುಕ್ತರು ಎಂದು ಗೊತ್ತಿರಲಿಲ್ಲ, ಮಾತಿನ ಭರದದಲ್ಲಿ ಏನಾದರೂ ಆಗಿರಬಹುದು. ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ರೀತಿ ಅಧಿಕಾರಿಯೊಬ್ಬರು ನಡೆದುಕೊಂಡಿರುವುದನ್ನು ಖಂಡಿಸುತ್ತೇನೆ ಎಂದರು.