ವಿಜಯಪುರ:ಇನ್ನೇನು ಮುಂಗಾರು ಮಳೆ ಭೂಮಿಯನ್ನು ಸ್ಪರ್ಶ ಮಾಡುತ್ತಿದೆ. ಜೂನ್ ತಿಂಗಳು ಬಂತೆಂದರೆ ಮಳೆಗಾಲ ಆರಂಭ ಎಂದೇ ಲೆಕ್ಕ. ರೈತ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಅಣಿಯಾಗುತ್ತಾನೆ. ಎತ್ತುಗಳನ್ನು ಹೊಲಕ್ಕೆ ಇಳಿಸಿ ದುಡಿಸುವ ಮುನ್ನ ಕಾರಹುಣ್ಣಿಮೆಯಲ್ಲಿ ಮನರಂಜನೆಗಾಗಿ ಎತ್ತು ಬೆದರಿಸುವ ಸ್ಪರ್ಧೆ ಆಡುವುದು ವಾಡಿಕೆಯಾಗಿ ಬೆಳೆದುಬಂದಿದೆ. ಮಳೆ ಆರಂಭವಾಗಿ ಹೊಲ ಊಳುವುದು, ಬಿತ್ತನೆ ಎಂದು ಕೆಲಸ ಆರಂಭವಾದರೆ ರೈತನಿಗೆ ಮನರಂಜನೆ ಎಂಬುದೇ ಇರುವುದಿಲ್ಲ. ಬಿಡುವಿಲ್ಲದ ಕೆಲಸಗಳಲ್ಲಿ ರೈತರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ ಕಾರಹುಣ್ಣಿಮೆ ಹಬ್ಬವನ್ನು ಜೋರಾಗಿ ಆಚರಿಸಲಾಗುತ್ತದೆ.
ವಿಜಯಪುರ ಜಿಲ್ಲೆಯಲ್ಲಿ ಕಾರಹುಣ್ಣಿಮೆಯ ಸಂಭ್ರಮ ಹೆಚ್ಚಿಸಿರುವ ಬಬಲೇಶ್ವರ ತಾಲೂಕಿನ ಕಾಖಂಡಕಿಯ ಎತ್ತು ಬೆದರಿಸುವ ಸ್ಪರ್ಧೆಯಲ್ಲಿ ಈ ಬಾರಿ ಹಲವು ಅವಘಡಗಳು ಸಂಭವಿಸಿವೆ. ಎತ್ತು ಓಡಿಸುವಾಗ ಅದರ ಕಾಲಿಗೆ ಸಿಲುಕಿಕೊಂಡು 10 ಹೆಚ್ಚು ಜನ ಗಾಯಗೊಂಡ ಘಟನೆ ನಡೆದಿದೆ. ಇದರಲ್ಲಿ ಮೂವರಿಗೆ ಹೆಚ್ಚು ಪೆಟ್ಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಹುಣ್ಣಿಮೆ ಮುಗಿದ ಮೇಲೆ ಏಳು ದಿನಗಳ ನಂತರ ಕಾಖಂಡಕಿಯಲ್ಲಿ ಎತ್ತು ಓಡಿಸುವ ಸ್ಪರ್ಧೆಯನ್ನು ಆಚರಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅಂದು ಗ್ರಾಮದಲ್ಲಿ ಸಂಭ್ರಮೋ ಸಂಭ್ರಮ ಇರುತ್ತದೆ. ಗ್ರಾಮದ ತುಂಬ ಶುಭಾಶಯ ಕೋರುವ ಪೋಸ್ಟರ್‌ಗಳು ರಾರಾಜಿಸುತ್ತಿರುತ್ತವೆ. ರೈತರು ತಮ್ಮ ಹೋರಿ, ಎತ್ತುಗಳಿಗೆ ಶೃಂಗಾರ ಮಾಡಿ ಓಡುವ ಸ್ಪರ್ಧೆಗೆ ತಯಾರಿ ಮಾಡುತ್ತಾರೆ. ಗ್ರಾಮದ ಹಿರಿಯ ರಾಮನಗೌಡ ಪಾಟೀಲ್ ಅವರ ಮನೆಯಿಂದ ಕೆಂಪು ಮತ್ತು ಬಿಳಿ ಕರಿಹರಿಯುವ ಎತ್ತುತಂದು ವಾದ್ಯ ಮೇಳದಿಂದ ಎತ್ತುಗಳ ಮೆರಣಿಗೆ ಮಾಡಿಸಿದ ನಂತರ ಹೆದರಿಸುವ ಸ್ಪರ್ಧೆ ಆರಂಭವಾಗುತ್ತದೆ.
ಶನಿವಾರ ಮಧ್ಯಾಹ್ನ ನಡೆದ ಎತ್ತುಗಳ ಬೆದರಿಸುವ ಸ್ಪರ್ಧೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಕಾಖಂಡಕಿ ಸೇರಿದಂತೆ ಹಲವು ಗ್ರಾಮಗಳಿಂದ ಈ ಸ್ಪರ್ಧೆ ನೋಡಲು ಬಂದಿದ್ದರು. ಸ್ಪರ್ಧೆ ಆರಂಭವಾಗುತ್ತಿದ್ದಂತೆ ಎತ್ತುಗಳನ್ನು ಹಿಡಿದು ಅದನ್ನು ರೊಚ್ಚಿಗೆಬ್ಬಿಸಲು ಬಡಿಗೆಯಿಂದ ಬಡಿಯುತ್ತಾರೆ.