ಯಾದಗಿರಿ : ಕೂಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಕಾರ್ಮಿಕರಿಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಯ್ಕಲ್ ಗ್ರಾಮದಲ್ಲಿ ನಡೆದಿದೆ.
ಯಾದಗಿರಿಯಲ್ಲಿ ಟ್ರಾಕ್ಟರ್ ಪಲ್ಟಿ.. ನಾಯ್ಕಲ್ ಬಳಿ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಟ್ರ್ಯಾಕ್ಟರ್ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಅತಿವೇಗವಾಗಿ ಟ್ರ್ಯಾಕ್ಟರ್ ಚಲಾಯಿಸಿದ ಪರಿಣಾಮ ಇಂಜಿನ್ ಮತ್ತು ಟ್ರ‍್ಯಾಲಿ ಮಧ್ಯೆ ಇರುವ ಕೊಂಡಿ ಮುರಿದು ಪಲ್ಟಿಯಾಗಿದೆ.
ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು,10 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಡಿಸಿ ಡಾ.ಆರ್. ರಾಗಪ್ರಿಯಾ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅತಿವೇಗವಾಗಿ ಮತ್ತು ಅಪಾಯಕಾರಿಯಾಗಿ ಟ್ರ‍್ಯಾಕ್ಟರ್ ಚಾಲನೆ ಮಾಡಿದ ಪರಿಣಾಮ ಚಾಲಕನ ಮತ್ತು ಟ್ರ‍್ಯಾಕ್ಟರ್ ಮಾಲೀಕನ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗುವುದು. ಕೂಲಿ ಕಾರ್ಮಿಕರನ್ನು ಮತ್ತು ವಿದ್ಯಾರ್ಥಿಗಳನ್ನು ವಾಹನಗಳ ಟಾಪ್ ಮೇಲೆ ಮತ್ತು ಅಪಾಯಕಾರಿಯಾಗಿ ಕೂಡಿಸಿಕೊಂಡು ಹೋಗುವ ವಾಹನಗಳ ಮಾಲೀಕರ ಮತ್ತು ಚಾಲಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ. ಸಿ ಬಿ ವೇದಮೂರ್ತಿಯವರು ತಿಳಿಸಿದರು.