ತೊಗರಿ ಬೇಳೆಯ ಬೆಲೆ ಏರಿಕೆ ಕುರಿತು ಬೆಳೆಗಾರ ಪ್ರವೀಣ ದೇಸಾಯಿ ಮಾತು ವಿಜಯಪುರ:ಅಕಾಲಿಕ ಮಳೆಯಿಂದ ತೊಗರಿ ಆವಕದ ಕೊರತೆ ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ತೊಗರಿ ಮಾರುಕಟ್ಟೆಗೆ ಬಾರದ ಹಿನ್ನೆಲೆ ವಿಜಯಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ತೊಗರಿ ಬೆಲೆ ಏಕಾಏಕಿ ಕ್ವಿಂಟಾಲ್‌ಗೆ ನಾಲ್ಕು ಸಾವಿರದಿಂದ ಹತ್ತು ಸಾವಿರದವರೆಗೆ ಏರಿಕೆಯಾಗಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ವಿಜಯಪುರ ಭಾಗದ ರೈತರು ಹಿಂದಿನಂತೆ ಜೋಳವನ್ನು ಹೆಚ್ಚಾಗಿ ಬೆಳೆಯುವುದನ್ನು ಕೈಬಿಟ್ಟಿದ್ದಾರೆ. ಬದಲಾಗಿ ಕಳೆದ ಐದು ವರ್ಷಗಳಿಂದ ತೊಗರಿ ಬೆಳೆಗೆ ಆದ್ಯತೆ ನೀಡುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅದರಲ್ಲಿ ಈಗ 4-5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯನ್ನೇ ಬೆಳೆಯುತ್ತಿದ್ದಾರೆ.
ಆದರೆ ಈ ಬಾರಿ ಮುಂಗಾರು ಹಂಗಾಮಿನ ಮುನ್ನವೇ ತೊಗರಿಯನ್ನು ಮಾರುಕಟ್ಟೆಗೆ ತರಬೇಕಿತ್ತು. ಅಕಾಲಿಕ ಮಳೆಯಿಂದ ತೊಗರಿ ಗಿಡದಲ್ಲಿ ಹೂ ಸರಿಯಾಗಿ ಬಿಡದ ಕಾರಣ, ಅದನ್ನು ಕಟಾವು ಮಾಡಲು ಅನ್ನದಾತರು ಹಿಂದೇಟು ಹಾಕುತ್ತಿದ್ದು, ತೊಗರಿಯ ಆವಕ ಪ್ರಮಾಣ ಕಡಿಮೆಯಾಗಿದೆ. ಮೊದಲು ಸ್ಥಳೀಯ ರೈತರು ಬೆಳೆದ ತೊಗರಿ ಅಧಿಕವಾಗಿ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿತ್ತು. ಇದರ ಜೊತೆ ಕಲಬುರಗಿ, ಯಾದಗಿರಿಯಿಂದಲೂ ಮಾರುಕಟ್ಟೆ ಬರುತ್ತಿದ್ದ ಕಾರಣ ತೊಗರಿ ಬೆಲೆ ಹಿಡಿತದಲ್ಲಿತ್ತು.
ಆದರೆ ಈ ಬಾರಿ ಬೇರೆ ಜಿಲ್ಲೆಯ ತೊಗರಿ ಮಾರುಕಟ್ಟೆಗೆ ಬರದೇ ಇದ್ದು, ಇದರ ಜೊತೆ ಜಿಲ್ಲೆಯಲ್ಲಿ ತೊಗರಿ ಬೆಳೆ ಆಮದು ಪ್ರಮಾಣ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಇನ್ನೊಂದು ವಾರದಲ್ಲಿ ತೊಗರಿ ಬೆಳೆ ಆವಕ ಪ್ರಮಾಣ ಅಧಿಕವಾಗುವ ಸಾಧ್ಯತೆಯೂ ಇದ್ದು, ಆಗ ಬೆಲೆ ನಿಯಂತ್ರಣಕ್ಕೆ ಬರಬಹುದು ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.
ನಿರೀಕ್ಷಿತ ಮಟ್ಟಕ್ಕೆ ಬಂದಿಲ್ಲ:ತೊಗರಿ ಬೆಳೆ ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ಈ ಬಾರಿ ಬಂದಿಲ್ಲ, ಹೀಗಾಗಿ ಬೆಲೆ ಏರಿಕೆಯಾಗಿದೆ. ಮಳೆ ಪ್ರಮಾಣ ಕಡಿಮೆಯಾದ ಕಾರಣ ತೊಗರಿ ಹೂ ಬಿಟ್ಟಿಲ್ಲ, ಇನ್ನು ಸಾಕಷ್ಟು ರೈತರು ತೊಗರಿ ಕಟಾವು ಮಾಡಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುತ್ತಿದ್ದಾರೆ. ಹೀಗಾಗಿ ತೊಗರಿಗೆ ಹೆಚ್ಚಿನ ಬೆಲೆ ಬಂದಿದೆ. ಇನ್ನೊಂದು ವಾರದಲ್ಲಿ ತೊಗರಿ ಎಪಿಎಂಸಿ ಮಾರುಕಟ್ಟೆಗೆ ಬರಲಿದ್ದು ಬೆಲೆ ನಿಯಂತ್ರಣಕ್ಕೆ ಬರಲಿದೆ ಎಂದು ಎಪಿಎಂಸಿ ಆಯುಕ್ತೆ ಎಂ.ವಿ. ಶೈಲಜಾ ಹೇಳಿದರು.
ಇದೇ ವೇಳೆ ಮಾತನಾಡಿದ ತೊಗರಿ ಬೆಳೆಗಾರ ಪ್ರವೀಣ ದೇಸಾಯಿ, ಕೆಲ ಅನುಕೂಲವಂತ ರೈತರು ಕಳೆದ ಎರಡು ವರ್ಷಗಳಿಂದ ಬೆಳೆದ ತೊಗರಿಯನ್ನು ಸಂಗ್ರಹಿಸಿಟ್ಟು ಕೊಂಡಿದ್ದಾರೆ. ಅಂಥವರು ಬೆಲೆ ಹೆಚ್ಚಳವಾದಾಗ ಮಾರುಕಟ್ಟೆಗೆ ತರುತ್ತಾರೆ. ಈ ಬಾರಿ ಮಳೆ ಪ್ರಮಾಣ ಕಡಿಮೆಯಾದ ಕಾರಣ ತೊಗರಿ ಬೆಳೆ ಪ್ರಮಾಣ ಕಡಿಮೆಯಾಗಿದೆ. ಇದೇ ಕಾರಣಕ್ಕೆ 4-5 ಸಾವಿರ ರೂ. ಕ್ವಿಂಟಲ್ ತೊಗರಿ ಈಗ 10 ಸಾವಿರ ರೂ.ವರೆಗೆ ತಲುಪಿದೆ. ಬೆಲೆ ಇನ್ನೂ ಹೆಚ್ಚಾಗಬೇಕು ಆಗ ಮಾತ್ರ ರೈತ ನೆಮ್ಮದಿಯಿಂದ ಬದುಕಬಲ್ಲ. ಹಾಗೆ ಮಧ್ಯವರ್ತಿಗಳ ಬಗ್ಗೆ ಎಪಿಎಂಸಿ ಅಧಿಕಾರಿಗಳು ಗಮನಹರಿಸಿ ಅವರ ನಿಯಂತ್ರಣ ಮಾಡಬೇಕು ಎಂದರು.
ಇದನ್ನೂ ಓದಿ:ಉದ್ಯೋಗ ಖಾತ್ರಿ ಯೋಜನೆಯಡಿ ಬಂಗಾರ ಖಾತ್ರಿ ಮಾಡಿಕೊಂಡ ನರೇಗಾ ಕಾರ್ಮಿಕರು