ವಿಜಯಪುರ:ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ಜಿಲ್ಲೆಯ ಗಡಿ ಭಾಗದ ಧೂಳಖೇಡ ಹಾಗೂ ನಿಡಗುಂದಿ ಚೆಕ್ ಪೋಸ್ಟ್‌ಗಳಲ್ಲಿ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಲ್ಲೆಗೆ ಆಗಮಿಸಲು ಈಗಾಗಲೇ 56 ಸಾವಿರ ಜನ ಆನ್‌ಲೈನ್ ನೋಂದಣಿ ಮಾಡಿದ್ದಾರೆ. ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ತಪಾಸಣೆಗೆ ಧೂಳಖೇಡ ಚೆಕ್ ಪೋಸ್ಟ್ ಹಾಗೂ ಗೋವಾ, ತಮಿಳುನಾಡು ಸೇರಿದಂತೆ ಇತರೆ ಭಾಗದಿಂದ ಬರುವ ಪ್ರಮಾಣಿಕರ ಆರೋಗ್ಯ ತಪಾಸಣೆ ಮಾಡಲು ನಿಡಗುಂದಿ ಚೆಕ್ ಪೋಸ್ಟ್‌ಗಳಲ್ಲಿ ಅಗತ್ಯ ಸಲಕರಣೆಗಳೊಂದಿಗೆ ವಿವಿಧ ಇಲಾಖೆಗಳ ಸಿಬ್ಬಂದಿ ಕಾರ್ಯನಿರ್ವಹಿಸುವಂತೆ ಹೇಳಿದರು.
ಇನ್ನು ಬರುವ ಪ್ರಯಾಣಿಕರ ಇ-ಪಾಸ್ ಕುರಿತು ಪರಿಶೀಲನೆಗೆ ಪೊಲೀಸ್, ಆರೋಗ್ಯ ತಪಾಸಣೆಗೆ ವೈದ್ಯಕೀಯ ತಂಡ ನಿಯೋಜನೆ ಜೊತೆಗೆ 8 ಕೌಂಟರ್ ಆರಂಭಿಸಬೇಕು. ಡಾಟಾ ಎಂಟ್ರಿ ಮಾಡಿಕೊಳ್ಳಲು ಶಿಕ್ಷಕರನ್ನ ನೇಮಕ ಮಾಡಬೇಕು. ದಿನದ 24 ಗಂಟೆಗಳ ಕೆಲಸಕ್ಕೆ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಸಿದ್ಧತೆ ಹಾಗೂ ಅಗತ್ಯ ಸಲಕರಣೆಗಳ ವ್ಯವಸ್ಥೆ ಒದಗಿಬೇಕು ಎಂದರು.
ಇಂಡಿ ಹಾಗೂ ವಿಜಯಪುರ ಉಪ ವಿಭಾಗಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಪ್ರಯಾಣಿಕರ ತಪಾಸಣೆ ಬಳಿಕ ಅವರ ಕೈಗೆ ಸೀಲ್ ಹಾಕಬೇಕು.
ಗ್ರಾಮೀಣ ಭಾಗದವರನ್ನು ಶಾಲೆಯಲ್ಲಿ ಕ್ವಾರಂಟೈನ್ ಹಾಗೂ ನಗರ ಪ್ರದೇಶದ ಜನರಿಗೆ ಹೋಮ್ ಕ್ವಾರಂಟೈನ್ ಮಾಡಿ ಕೋವಿಡ್ ಲಕ್ಷಣಗಳು ಕಂಡು ಬಂದವನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಅಂತರ್ ರಾಜ್ಯ ಪ್ರಯಾಣಕ್ಕೆ ಇ-ಪಾಸ್ ಮೂಲಕ ಅನುಮತಿ ನೀಡಬೇಕು. ಗ್ರಾಮೀಣ ಭಾಗದಲ್ಲಿ ಕ್ವಾರಂಟೈನ್ ಮಾಡಿದ ಸ್ಥಳದಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಆಯಾ ಪಿಡಿಒಗಳ ಮೂಲಕ ತಿಳಿಸಬೇಕು ಎಂದರು.