ವಿಜಯಪುರ:ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಧರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರ ನಿವಾಸಕ್ಕೆ ಇಂದು ಬೆಳಿಗ್ಗೆ (ಗುರುವಾರ) ಭೇಟಿ ನೀಡಿದ ಅರಣ್ಯಾಧಿಕಾರಿಗಳು, ಕೆಲಹೊತ್ತು ಶೋಧ ನಡೆಸಿದ್ದಾರೆ. ಜಿಲ್ಲಾ ಉಪ ಅರಣ್ಯಾಧಿಕಾರಿ ಶಿವಶರಣಯ್ಯ, ಸಹಾಯಕ ಅರಣ್ಯಾಧಿಕಾರಿ ಭಾಗ್ಯವಂತ ಮಸೂದೆ, ವಲಯ ಅರಣ್ಯಾಧಿಕಾರಿ ಸಂತೋಷ ಆಜೂರ ಹಾಗೂ ಸಿಬ್ಬಂದಿ ಪರಿಶೀಲಿಸಿದರು. ವಿಜುಗೌಡ, ಪುತ್ರ ಶಾಶ್ವತಗೌಡ ಹಾಜರಿದ್ದು ಅಧಿಕಾರಿಗಳಿಗೆ ಸಹಕರಿಸಿದರು.
ವಿಜುಗೌಡ ಪಾಟೀಲ ಹೇಳಿದ್ದೇನು?: ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿಜುಗೌಡ ಪಾಟೀಲ, ''ಹುಲಿ ಉಗುರಿನ ಮಾದರಿಯ ಪೆಂಡೆಂಟ್ ನಕಲಿ ಎಂದು ನಿನ್ನೆಯೇ ಹೇಳಿದ್ದೆ. ಇಂದೂ ಸಹ ಅದನ್ನೇ ಹೇಳುತ್ತೇನೆ. ಹಾಗಿದ್ದೂ ಸಹ ತಮ್ಮ ಬಳಿ ಇರುವ ಈ ವಸ್ತುವನ್ನು ಖುದ್ದು ನಾನೇ ಅಧಿಕಾರಿಗಳಿಗೆ ನೀಡುವುದಾಗಿ ಹೇಳಿದ್ದೆ. ಆದರೆ, ಅಧಿಕಾರಿಗಳು ತಾವೇ ಇಂದು ಪರಿಶೀಲಿಸುವುದಾಗಿ ಹೇಳಿದ್ದರು. ಅದರಂತೆ ಪರಿಶೀಲಿಸಿದ್ದಾರೆ. ಅವರಿಗೆ ಸಹಕಾರ ಕೂಡ ನೀಡಿದ್ದೇವೆ. ಆ ವಸ್ತುವನ್ನು ಈಗಾಗಲೇ ಹಸ್ತಾಂತರಿಸಿದ್ದು ಅಧಿಕಾರಿಗಳು ಪರಿಶೀಲಿಸಿ ಖಚಿತಡಿಸಲಿ'' ಎಂದರು.
ವಿಜುಗೌಡ ಪಾಟೀಲ್ ನಿವಾಸದಲ್ಲಿ ಅರಣ್ಯಾಧಿಕಾರಿಗಳಿಂದ ತಪಾಸಣೆ ಮುಂದುವರೆದು ಮಾತನಾಡಿ, ''ವಾಸ್ತು ಪ್ರಕಾರವಾಗಿ 10-11 ವರ್ಷದ ಹಿಂದೆ ಆ ವಸ್ತುವನ್ನು ಸಣ್ಣ ಮೊತ್ತಕ್ಕೆ ಖರೀದಿಸಿದ್ದೆ. ಒಂದು ದಿನ ನನ್ನ ಮಗ ಶಾಶ್ವತಗೌಡ ಪಾಟೀಲ್ ಅದನ್ನು ಧರಿಸಿದ್ದ. ನಕಲಿ ಅಂತ ಗೊತ್ತಾದ ಬಳಿಕ ಆ ಸರವನ್ನು ತೆಗೆದಿಡಲಾಗಿದೆ. ಇದೀಗ ಹುಲಿ ಉಗುರಿನ ಮಾದರಿ ಪೆಂಡೆಂಟ್ ಧರಿಸಿದ ತಮ್ಮ ಮಗನ ಫೋಟೋ ಫೇಸ್ಬುಕ್ ಮತ್ತು ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆಗಿದೆ'' ಎಂದು ಹೇಳಿದರು.
ಅರಣ್ಯಾಧಿಕಾರಿಗಳ ಹೇಳಿಕೆ: ಪರಿಶೀಲನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ, ''ಶಾಶ್ವತಗೌಡ ಪಾಟೀಲ ಅವರ ಬಳಿ ಇದ್ದ ಹುಲಿ ಉಗುರಿನ ಪೆಂಡೆಂಟ್ ಅನ್ನು ನಾವು ವಶಕ್ಕೆ ತೆಗೆದುಕೊಂಡಿದ್ದೇವೆ. ಮಾಧ್ಯಮಗಳ ವರದಿಯನ್ನಾಧರಿಸಿ ನಾವಿಂದು ಅವರ ಮನೆ ಪರಿಶೀಲಿಸಿದ್ದೇವೆ. ಈ ಹುಲಿ ಉಗುರು ಅಸಲಿಯೋ ನಕಲಿಯೋ ಎಂಬುದರ ಕುರಿತು ಪರಿಶೀಲನೆಗೆ ಡೆಹ್ರಾಡೂನ್ನ ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಥವಾ ಹೈದರಾಬಾದ್‌ನ ಸಿಸಿಎಂಬಿಗೆ ಕಳುಹಿಸಲಾಗುವುದು. ಅಲ್ಲಿಂದ ವರದಿ ಬರುವವರೆಗೂ ಇದು ಅಸಲಿ ಹುಲಿ ಉಗುರೋ ಅಥವಾ ನಕಲಿಯೋ ಎಂಬುದರ ಕುರಿತು ಹೇಳಲಾಗುವುದಿಲ್ಲ. ಒಂದು ತಿಂಗಳಲ್ಲಿ ವರದಿ ಬರುತ್ತದೆ. ಬಂದ ನಂತರ ಒಂದು ವೇಳೆ ಇದು ಅಸಲಿ ಹುಲಿ ಉಗುರಿನಿಂದ ತಯಾರಿಸಿದ ಪೆಂಡೆಂಟ್ ಆಗಿದ್ದರೆ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಹುಲಿ ಉಗುರು ಪೆಂಡೆಂಟ್ ಹೊಂದಿರುವ ಆರೋಪ: ದರ್ಶನ್, ರಾಕ್ಲೈನ್ ವೆಂಕಟೇಶ್ ಮನೆಯಲ್ಲಿ ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ