ವಿಜಯನಗರ:ಈಜಲು ತೆರಳಿದ್ದ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಹೊಸಪೇಟೆಯ ಹೊರವಲಯದ ಕಾಲುವೆಯಲ್ಲಿ ನಡೆದಿದೆ. ಒಟ್ಟು 6 ಜನ ವಿದ್ಯಾರ್ಥಿಗಳು ಈಜಲು ಹೋಗಿದ್ದರು ಈ ಪೈಕಿ ಮೂವರು ನೀರು ಪಾಲಾಗಿದ್ದಾರೆ.
ಹೊಸಪೇಟೆಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳು ಹೊಸಪೇಟೆಯ MJ ನಗರ, ಗುಂಡಾ ಗ್ರಾಮ, ಕೊಪ್ಪಳದ ಹೊಸ ನಿಂಗಾಪುರದ ನಿವಾಸಿಗಳಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ನೀರುಪಾಲದವರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಭಾರತೀಯ ರಿಸರ್ವ್ ಬೆಟಾಲಿಯನ್ ಮುಖ್ಯ ಕಾನ್ಸ್ಟೇಬಲ್ ನಿಧನ.. ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ
ಈಜಾಡಲು ಹೋಗಿ ಕಾಲುವೆಯಲ್ಲಿ ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ವಿಜಯನಗರ ಎಸ್‌ಪಿ ಶ್ರೀಹರಿಬಾಬು ಅವರು ತಿಳಿಸಿದ್ದಾರೆ. ಇಂದು ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು 6 ಜನರು ಸ್ನಾನಕ್ಕೆಂದು ಕಾಲುವೆಗೆ ಇಳಿದಿದ್ದರು. ಮೂವರು ನಾಪತ್ತೆಯಾಗಿದ್ದಾರೆ. ಹೊಸಪೇಟೆಯ ವಿಜಯನಗರ ಕಾಲೇಜ್ನ ಇಬ್ಬರು ಪಿಯುಸಿ ವಿದ್ಯಾರ್ಥಿಗಳು, ಒಬ್ಬ ಪದವಿ ವಿದ್ಯಾರ್ಥಿಯಾದ ಯಶ್ವಂತ್, ಅಂಜಿನಿ, ಗುರುರಾಜ್ ನೀರುಪಾಲಾದವರು ಎಂದು ಹೇಳಿದರು.
ನೀರು ಪಾಲಾದವರಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. ಹೊಸಪೇಟೆ ನಗರದ ಖಾಸಗಿ ಕಾಲೇಜಿನ ಬಿಕಾಂ ವಿದ್ಯಾರ್ಥಿ 18 ವರ್ಷದ ಅಂಜಿನಿ, 17 ವರ್ಷದ ಪಿಯುಸಿ ವಿದ್ಯಾರ್ಥಿಗಳಾದ ಗುಂಡಾ ಗ್ರಾಮದ ಗುರುರಾಜ್, ಕೊಪ್ಪಳದ ವಸಂತ್ ಶನಿವಾರ ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ಕೆನಾಲ್‌ನಲ್ಲಿ ಈಜಾಡಲು ಬಂದಿದ್ದರು. ದುರದೃಷ್ಟವಶಾತ್ ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಒಳಗಾಗಿದ್ದು, ಒಬ್ಬರಾದ ನಂತರ ಒಬ್ಬರಂತೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಎಸ್‌ಪಿ ಶ್ರೀಹರಿಬಾಬು ಹೇಳಿದರು.