ವಿಜಯಪುರ:ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ಜಿಲ್ಲೆಯಲ್ಲಿ ನಡೆದಿದೆ. ಲಾರಿ ಹಾಗೂ ಆಂಬ್ಯುಲೆನ್ಸ್ ಮಧ್ಯೆ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಿಂದಗಿ ತಾಲೂಕಿನ ರಾಜ್ಯ ಹೆದ್ದಾರಿಯಲ್ಲಿನ ಯರಗಲ್ ಕ್ರಾಸ್ ಬಳಿ ಘಟನೆ ನಡೆಯಿತು. ಮೃತ ವ್ಯಕ್ತಿಯನ್ನು ಅಂತರಗಂಗಿ ಗ್ರಾಮದ ಚನ್ನು ಗಾಣಿಗೇರ (27) ಎಂದು ಗುರುತಿಸಲಾಗಿದೆ.
ಆಂಬ್ಯುಲೆನ್ಸ್ನಲ್ಲಿದ್ದ ನಾಲ್ವರ ಪೈಕಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಕ್ಕಿಯ ರಭಸಕ್ಕೆ ಆಂಬ್ಯುಲೆನ್ಸ್ ಮುಂಭಾಗ ನಜ್ಜುಗುಜ್ಜಾಗಿದೆ.
ರೋಗಿ ಸಾವು: ಸಿಂದಗಿಯಿಂದ ಹಂಚಿನಾಳ ಗ್ರಾಮಕ್ಕೆ ರೋಗಿಯನ್ನು ಕರೆತರಲು ಹೊರಟ ವಾಹನ ಅಪಘಾತಕ್ಕೀಡಾಗಿದೆ. ಸಿಂದಗಿಯಿಂದ ಕಲಬುರಗಿಗೆ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಮೃತನ ಹೆಸರು ತಿಳಿದುಬಂದಿಲ್ಲ. ಸ್ಥಳಕ್ಕೆ ಸಿಂದಗಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಕ್ಷಕಿ ಸಾವು: ಲಾರಿ ಡಿಕ್ಕಿಯಾಗಿ ಶಿಕ್ಷಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸವಿತಾ ನಾಗಪ್ಪ ಸಗಾಯಿ (30) ಮೃತ ಶಿಕ್ಷಕಿ. ಇಂಡಿ ತಾಲೂಕಿನ ಝಳಕಿಯ ಗುರುಚಂದ್ರ ಶೇಖರ ವಿಶೇಷಚೇತನ ಮಕ್ಕಳ ಶಾಲೆಯ ಶಿಕ್ಷಕಿಯಾಗಿದ್ದರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಧೂಳಖೇಡ ಆರ್ಟಿಒ ಚೆಕ್ ಪೋಸ್ಟ್ ಬಳಿ ಘಟನೆ ನಡೆದಿದೆ. ಝಳಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.