ವಿಜಯಪುರ :ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಮೂಲದ ಒಂದೇ ಕುಟುಂಬದ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋವಾ ರಾಜ್ಯದ ಜುವಾರಿನಗರ ಬಿರ್ಲಾದಲ್ಲಿ ಮಂಗಳವಾರ ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರ ದೌರ್ಜನ್ಯದಿಂದ ಮನನೊಂದು ಅತ್ಮಹತ್ಯೆ ಮಾಡಿಕೊಂಡಿದ್ದಾಗಿ ಆರೋಪಿಸಲಾಗಿದೆ.
ಜುವಾರಿನಗರ ಬಿರ್ಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ತಾಲೂಕಿನ ಸುಲ್ತಾನಪೂರ ಗ್ರಾಮದ ಹುಲಗೆಪ್ಪ ಅಂಬಿಗೇರ (35), ಈತನ ಸಹೋದರ ಗಂಗಪ್ಪ ಅಂಬಿಗೇರ (29) ಹಾಗೂ ಹುಲಗೆಪ್ಪನ ಪತ್ನಿ ದೇವಮ್ಮ ಅಂಬಿಗೇರ ( 28) ಆತ್ಮಹತ್ಯೆ ಮಾಡಿಕೊಂಡವರು.
ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಈ ಮೂವರೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮುದ್ದೇಬಿಹಾಳದ ಗೋವಾದ ಜುವಾರಿನಗರದ ಬಿರ್ಲಾಕ್ಕೆ ಹೋಗಿ ಕೂಲಿ ಜೀವನ ಸಾಗಿಸುತ್ತಿದ್ದರು. ಈ ನಡುವೆ, ದೇವಮ್ಮ ಅವರ 17 ವರ್ಷದ ಸಹೋದರ ಬಿರ್ಲಾಕ್ಕೆ ಬಂದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇವರೊಂದಿಗೆ ವಾಸವಾಗಿದ್ದನು.
ಇದನ್ನೂ ಓದಿ:ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿ ಮಾಡಿದ ಆರೋಪ: ವ್ಯಕ್ತಿ ಬಂಧನ
ಕೆಲ ದಿನಗಳ ಹಿಂದೆ ಪೊಲೀಸರು ಮನೆಗೆ ಬಂದು ದೇವಮ್ಮಳ ಸಹೋದರನನ್ನು ಕರೆದುಕೊಂಡು ಹೋಗಿದ್ದರು. ಕಾರಣ ಕೇಳಲು ಠಾಣೆಗೆ ಹೋದ ದೇವಮ್ಮ ಹಾಗೂ ಅವಳ ಪತಿಯನ್ನು ಪೊಲೀಸರು ಬೆದರಿಸಿ ಕಳುಹಿಸಿದ್ದರು ಎನ್ನಲಾಗಿದೆ. ಇದಾದ ಕೆಲ ದಿನಗಳ ಬಳಿಕ ದೇವಮ್ಮ, ಹುಲಗೆಪ್ಪ ಹಾಗೂ ಗಂಗಪ್ಪ ಅವರನ್ನೂ ವಿಚಾರಣೆಗೆ ಕರೆದುಕೊಂಡು ಹೋಗಿದ್ದರು. ಇದಾದ ನಂತರ ಆ ಮೂವರು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡೆತ್ನೋಟ್ನಲ್ಲಿ ಏನಿದೆ.?
ಜುವಾರಿನಗರದ ಮನೆಯೊಂದರಲ್ಲಿ 10 ಲಕ್ಷ ರೂ. ಬೆಲೆಬಾಳುವ ಬಂಗಾರದ ಆಭರಣಗಳು ಕಳ್ಳತನವಾಗಿವೆ. ಈ ಕಳ್ಳತನದಲ್ಲಿ ನಿಮ್ಮ ಕುಟುಂಬದ ಕೈವಾಡವಿದೆ ಎಂದು ಪೊಲೀಸರು ಆರೋಪಿಸಿದ್ದರು. ಕಳ್ಳತನ ಮಾಡಿದ್ದು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದರು. ಆದರೆ, ಒಪ್ಪದಿದ್ದಾಗ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದರು. ಇದರಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್ನೋಟ್ನಲ್ಲಿ ಬರದಿದ್ದಾರೆ.
ಸಂಶಯಕ್ಕೆ ಕಾರಣವಾದ ಪೊಲೀಸರ ನಡೆ..!
ಆತ್ಮಹತ್ಯೆ ಮಾಡಿಕೊಂಡವರ ಮೃತದೇಹಗಳನ್ನು ಪೊಲೀಸರು ಲಗುಬಗೆಯಿಂದ ಮರಣೋತ್ತರ ಪರೀಕ್ಷೆಗೆ ಒಳಪಡಿಸಿರುವುದು ಸಂಶಯಕ್ಕೆ ಕಾರಣವಾಗಿದೆ. ಹಲ್ಲೆ ಮಾಡಿದ್ದನ್ನು ಮರೆಮಾಚಲು ಪೊಲೀಸರು ಈ ರೀತಿಯಾಗಿ ವರ್ತಿಸಿದ್ದಾರೆಂದು ಹುಲಗೆಪ್ಪನ ಕುಟುಂಬಸ್ಥರು ಹಾಗೂ ಸ್ಥಳೀಯ ಸಂಘಟನೆಗಳು ಆರೋಪಿಸಿವೆ. ಘಟನೆಯ ಕುರಿತು ಉನ್ನತ ತನಿಖೆ ನಡೆಸುವಂತೆ ಅಖಿಲ ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ಧಣ್ಣ ಮೇಟಿ, ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಒತ್ತಾಯಿಸಿದ್ದಾರೆ.