ವಿಜಯಪುರ: ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ವಾಕ್ ಸಮರ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸರ್ಕಾರ ಈಗಾಗಲೇ ಚೀಫ್ ಇಂಜಿನಿಯರ್ ಅವರಿಂದ ಸ್ಪಷ್ಟೀಕರಣ ಕೊಟ್ಟಿದೆ ಎಂದಿದ್ದಾರೆ.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸುಮಲತಾ ಮಧ್ಯೆ ಗಲಾಟೆ ಜೋರಾಗಿ ನಡೆಯುತ್ತಿದೆ. ಜನರಿಗೆ ಅದು ತಮಾಷೆಯಾಗಿ ಕಾಣ್ತಿದೆ. ಆದರೆ ನಮಗೆ ಅದನ್ನು ನೋಡಲು ಸಮಯವಿಲ್ಲ ಎಂದರು.
ಅಂಬರೀಶ್ ಸ್ಮಾರಕ ವಿಚಾರದ ಬಗ್ಗೆ ನಟ ದೊಡ್ಡಣ್ಣ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಅಂಬರೀಶ್ ಅವರು ಸಾರ್ವಜನಿಕ ಬದುಕಿನಲ್ಲಿದ್ದರು. ರಾಜಕಾರಣಿಯೂ ಹೌದು, ಚಿತ್ರನಟರೂ ಹೌದು. ಅವರ ಸ್ಮಾರಕ ಮಾಡುವುದರಲ್ಲಿ ತಪ್ಪಿಲ್ಲ. ಅದು ಜನರ ಬಯಕೆಯೂ ಆಗಿದೆ. ಅವರ ಬಯಕೆಯಂತೆ ನಮ್ಮ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಪೂರಕ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಿಎಂ ಬದಲಾವಣೆ ಇಲ್ಲ: ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ನಾನು ಸಿಎಂ ಸ್ಥಾನದ ರೇಸ್ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮುಂದಿನ ಚುನಾವಣೆ ಬಳಿಕ ಯಾರು ಸಿಎಂ ಆಗುತ್ತಾರೆ ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತೆ. ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ. ನಾನು ಯಾವುದೇ ಅಧಿಕಾರವನ್ನು ಬೇಡಿ ಪಡೆಯುವವನಲ್ಲ, ನಾನು ಯಾವುದೇ ಸ್ಥಾನದ ಅಪೇಕ್ಷಿತನಲ್ಲ ಎಂದು ಹೇಳಿದರು.
ಸಾರಿಗೆ ನೌಕರರ ವಿಷಯ: ಕೊರೊನಾದಲ್ಲಿ ಅತಿ ಹೆಚ್ಚು ತೊಂದರೆ ಆಗಿದ್ದು ಸಾರಿಗೆ ಇಲಾಖೆಗೆ. ನೌಕರರಿಗೆ ಸಂಬಳ ಕೊಡೋಕೆ ಸಮಸ್ಯೆಯಾಗಿದ್ದು, ಈ ಮೊದಲು ಸಿಎಂ 2480 ಕೋಟಿ ಕೊಟ್ಟಿದ್ದರು. ಇದೀಗ 165 ಕೋಟಿ ರೂಪಾಯಿ ನೀಡಿದ್ದಾರೆ. ನಾಳೆಯಿಂದ ಎಲ್ಲರಿಗೂ ಸಂಬಳ ಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಸಂಬಳ ಹೆಚ್ಚಳ ಕುರಿತು ಕೋಡಿಹಳ್ಳಿ ಚಂದ್ರಶೇಖರ್ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೋಡಿಹಳ್ಳಿ ಅವರಿಗೆ ಹೋರಾಟ ಮಾಡೋದು ಮಾತ್ರ ಗೊತ್ತು. ನಮ್ಮ ಸಿಬ್ಬಂದಿ ಅವರ ಹೋರಾಟಕ್ಕೆ ಕೈ ಜೋಡಿಸುವುದಿಲ್ಲ. ಕಷ್ಟ ಕಾಲದಲ್ಲಿಯೂ ನಾವು ಸಂಬಳ ನೀಡಿದ್ದೇವೆ ಎಂದರು.
ಇದನ್ನೂ ಓದಿ:ಕೊಡಗಿನಲ್ಲಿ 4 ದಿನ ಭಾರಿ ಮಳೆ ಸಾಧ್ಯತೆ: ಜಿಲ್ಲಾಡಳಿತದಿಂದ ಆರೆಂಜ್, ರೆಡ್ ಅಲರ್ಟ್ ಘೋಷಣೆ