ವಿಜಯಪುರ:ನಗರದಲ್ಲಿ ಮಂಕಿ ಕ್ಯಾಪ್, ಮಾಸ್ಕ್ ಹಾಗೂ ಬರ್ಮುಡಾ ಚಡ್ಡಿ ಧರಿಸಿಕೊಂಡು ಏಳೆಂಟು ಜನರ ತಂಡ ಎಗ್ಗಿಲ್ಲದೆ ಕಳ್ಳತನ ಮಾಡುತ್ತಿದೆ. ತಡರಾತ್ರಿ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ನುಗ್ಗುತ್ತಿದ್ದು, ಗುಮ್ಮಟನಗರಿಯ ಜನತೆಗೆ ಆತಂಕ ಶುರುವಾಗಿದೆ.
ಕಳೆದ ಕೆಲವು ದಿನಗಳಿಂದ ಏಳೆಂಟು ಜನ ಕಳ್ಳರ ತಂಡ ಹಗಲು ಹೊತ್ತು ಬೀಗ ಹಾಕಿರುವ ಮನೆಗಳನ್ನು ಗುರುತು ಮಾಡಿಕೊಂಡು ರಾತ್ರಿ ಆ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದೆ. ಮನೆ ಕಾಂಪೌಂಡಿಗೆ ನುಗ್ಗುವ ಹಾಗೂ ಕಳ್ಳತನ ಮಾಡಿ ಹೊರಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಬೀಟ್ ಪೊಲೀಸರನ್ನು ಹೆಚ್ಚಿಸಿದೆ. ಇದೇ ವೇಳೆ, ಸಾರ್ವಜನಿಕರು ನಿರ್ಲಕ್ಷ್ಯ ವಹಿಸದಂತೆ ಹಾಗು ಎಚ್ಚರಿಕೆಯಿಂದ ಇರುವಂತೆ ಸೂಚನೆ ಮತ್ತು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.
ಇನ್ನೊಂದೆಡೆ, ಬೀಟ್ ಪೊಲೀಸರನ್ನು ಹೆಚ್ಚಿಸಿದರೂ ಕಳ್ಳರ ಗ್ಯಾಂಗ್ ಯಾರ ಕೈಗೂ ಸಿಗದೆ ಕೈಚಳಕ ಮುಂದುವರಿಸಿದೆ. ಈಗಾಗಲೇ ಇಲಾಖೆ, ತನಿಖೆಗೆ ಪೊಲೀಸ್ ತಂಡ ರಚಿಸಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸುವಂತೆಯೂ ಮನವಿ ಮಾಡಿದೆ. ಅನುಮಾನಾಸ್ಪದ ರೀತಿಯಲ್ಲಿ ಯಾರಾದರೂ ತಮ್ಮ ಪ್ರದೇಶದಲ್ಲಿ ಓಡಾಡುವುದು ಕಂಡುಬಂದರೆ ತಕ್ಷಣವೇ ಇಆರ್ಎಸ್ಎಸ್ 112 ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದ್ದಾರೆ.
ಮನೆಗೆ ಬೀಗ ಹಾಕಿ ಬೇರೆ ಊರಿಗೆ ಹೋಗುವವರು ನಗದು ಸೇರಿದಂತೆ ಆಭರಣ, ಬೆಲೆ ಬಾಳುವ ವಸ್ತುಗಳನ್ನು ಮನೆಯಲ್ಲಿಡದೆ, ಬ್ಯಾಂಕ್ ಲಾಕರ್ನಲ್ಲಿಟ್ಟರೆ ಒಳ್ಳೆಯದು. ಮನೆ ಮುಂದೆ ಸಾಕಷ್ಟು ಬೆಳಕಿರುವಂತೆ ವಿದ್ಯುತ್ ದೀಪಗಳನ್ನು ಅಳವಡಿಸಿ. ಪೊಲೀಸ್ ಇಲಾಖೆ ಬೀಟ್ ಜೊತೆಗೆ ಆಯಾ ಪ್ರದೇಶದಲ್ಲಿ ಜನರು ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿಕೊಂಡು ಇಂತಹ ಸನ್ನಿವೇಶಗಳು ಎದುರಾದಾಗ ಪರಸ್ಪರ ಸಂಪರ್ಕದಲ್ಲಿರಲು ಹಾಗೂ ಜಾಗ್ರತೆಯಿಂದಿರಲು ಸಹಕಾರಿಯಾಗುತ್ತದೆ. ಅನುಕೂಲವಿದ್ದರೆ ಸಿಸಿಟಿವಿ ಅಳವಡಿಸಿಕೊಳ್ಳುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಪೊಲೀಸ್ ಮೂಲಗಳ ಪ್ರಕಾರ, ಇದು ಅನ್ಯ ರಾಜ್ಯದ ಕಳ್ಳರ ಗ್ಯಾಂಗ್ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಅಪಾರ್ಟ್ಮೆಂಟ್ಗಳಿಗೆ ನುಗ್ಗಿ ಶೂ- ಚಪ್ಪಲಿ ಕಳ್ಳತನ : ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ