ವಿಜಯಪುರ: ಕೊರೊನಾ ಮೂರನೇ ಅಲೆಯಲ್ಲಿ ಚಿಕ್ಕಮಕ್ಕಳು ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆ ಇರುವ ಕಾರಣ ನಗರದ ಪ್ರತಿಷ್ಠಿತ ಬಿಎಲ್ಡಿಇ ಆಸ್ಪತ್ರೆಯನ್ನು ಈಗಲೇ ಮಕ್ಕಳ ಆರೈಕೆ ಕೇಂದ್ರವನ್ನಾಗಿ ಮಾಡಲು ಸಿದ್ಧತೆ ನಡೆಸಲಾಗಿದೆ. ಸದ್ಯ ನಾಲ್ಕು ಮಕ್ಕಳು ಕೊರೊನಾದಿಂದ ಭಾದಿತರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಕ್ಕಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಕೋವಿಡ್ ವಿಶೇಷ ಘಟಕ ಆರಂಭಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಮೂರನೆ ಅಲೆಯ ನಿಯಂತ್ರಣ ಮಾಡುವ ಕುರಿತು ಬಿಎಲ್ಡಿಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ ವೈದ್ಯರು ಹಾಗೂ ತಜ್ಞರ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾಗುವ ಕುರಿತು ವರದಿಗಳು ಬರುತ್ತಿದ್ದು, ಇದನ್ನು ಗಮನದಲ್ಲಿರಿಸಿ, ನಾವು ಈಗಿನಿಂದಲೇ ಮಕ್ಕಳ ಚಿಕಿತ್ಸೆಗೆ ಹೆಚ್ಚು ನಿಗಾ ವಹಿಸಬೇಕು, ಯಾವುದೇ ಮಗು ಚಿಕಿತ್ಸೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಇದೆ. ಅದರ ಅನುಸಾರ ಹೆಚ್ಚಿನ ಬೆಡ್ಗಳು, ಆಕ್ಸಿಜನ್ ಮತ್ತು ವೆಂಟಿಲೇಟರ್ ವ್ಯವಸ್ಥೆ ಮಾಡಲು ಚಿಕ್ಕಮಕ್ಕಳ ವಿಭಾಗವನ್ನು ಈಗಿನಿಂದಲೇ ಸನ್ನದ್ಧಗೊಳಿಸಲು ಎಂ.ಬಿ ಪಾಟೀಲ ಸೂಚಿಸಿದರು.