ವಿಜಯಪುರ: ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದು, ಆತನ ಬಳಿ ಬರೋಬ್ಬರಿ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಇಂಡಿ ತಾಲೂಕಿನ ಸಾವಳಸಗಿ ಗ್ರಾಮದ ನಿವಾಸಿ ರಾಜು ಶಿವಾನಂದ ಹೊಸಮನಿ ಬಂಧಿತ ವ್ಯಕ್ತಿ. ಇತ್ತೀಚಿಗೆ ನಗರ ಪ್ರದೇಶದಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಸ್ ಪಿ ಅನುಪಮ್ ಅಗರವಾಲ್ ಗೋಲಗುಮ್ಮಟ ಮತ್ತು ಸಿಪಿಐ ಬಸವರಾಜ್ ಮೂಕರ್ತಿಹಾಳ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಸೋಲಾಪುರ ನಾಕಾ ಬಳಿ ವಾಹನ ತಪಾಸಣೆ ನಡೆಸುವ ವೇಳೆ ಈತ ಸಂಶಯಾಸ್ಪದವಾಗಿ ಕಂಡುಬಂದ ಹಿನ್ನೆಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಆರೋಪಿ ನಾಲ್ಕು ಮನೆಯಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇನ್ನು ಬಂಧಿತನಿಂದ 233 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಆರೋಪಿಯನ್ನು ಪತ್ತೆ ಹಚ್ಚಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ ಪೊಲೀಸ್ ತಂಡಕ್ಕೆ ಎಸ್ ಪಿ ಅನುಪಮ್ ಅಗರವಾಲ್ ಬಹುಮಾನ ಘೋಷಿಸಿದ್ದಾರೆ.