ಕರ್ನಾಟಕ

karnataka

ETV Bharat / state

ಸಿದ್ದೇಶ್ವರ ಶ್ರೀಗಳ ತತ್ವಾದರ್ಶ ಪಠ್ಯಪುಸ್ತಕದಲ್ಲಿ ಅಳವಡಿಸಬೇಕು: ಸ್ವೀಕರ್​ ಯು.ಟಿ. ಖಾದರ್‌ - ಸೌಹಾರ್ದ ಸಮಾಜ

ಸಿದ್ದೇಶ್ವರ ಶ್ರೀಗಳ ತತ್ವಾದರ್ಶ ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಎಂದು ವಿಧಾನಸಭೆ ಸ್ವೀಕರ್​ ಯು.ಟಿ. ಖಾದರ್‌ ಹೇಳಿದರು.

ಸ್ವೀಕರ್​ ಯು.ಟಿ. ಖಾದರ್‌
ಸಿದ್ದೇಶ್ವರ ಶ್ರೀಗಳ ತತ್ವಾದರ್ಶ ಪಠ್ಯಪುಸ್ತಕದಲ್ಲಿ ಅಳವಡಿಸಬೇಕು: ಸ್ವೀಕರ್​ ಯು.ಟಿ. ಖಾದರ್‌

By ETV Bharat Karnataka Team

Published : Dec 27, 2023, 11:24 AM IST

Updated : Dec 27, 2023, 2:37 PM IST

ಸ್ವೀಕರ್​ ಯು.ಟಿ. ಖಾದರ್‌ ಮಾತನಾಡಿದರು

ವಿಜಯಪುರ:ಶತಮಾನದ ಶ್ರೇಷ್ಠ ಸಂತ, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಸಿದ್ದೇಶ್ವರ ಸ್ವಾಮೀಜಿ ಅವರು ನಿಧನರಾಗಿ ಒಂದು ವರ್ಷ ಕಳೆದಿರುವ ಹಿನ್ನೆಲೆ ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಗುರು ನಮನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಡಿಸೆಂಬರ್ 31ರವರೆಗೆ ಗುರುನಮನ ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳ ಏರ್ಪಡಿಸಲಾಗಿದೆ. ಸೋಮವಾರ ನಡೆದ ಮೂರನೇ ದಿನದ ಜಾಗತಿಕ ಆಧ್ಯಾತ್ಮಿಕ ಚಿಂತನೆಯ ಗೋಷ್ಠಿಯನ್ನು ವಿಧಾನಸಭೆ ಸ್ವೀಕರ್​ ಯು.ಟಿ. ಖಾದರ್‌ ಉದ್ಘಾಟಿಸಿದರು.

ಇದೇ ವೇಳೆ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಸಿದ್ದೇಶ್ವರ ಶ್ರೀಗಳ ಸಂದೇಶಗಳು ಬಲಿಷ್ಠ ಭಾರತಕ್ಕೆ ಪೂರಕವಾಗಿವೆ. ಶ್ರೀಗಳ ತತ್ವಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವುದು ಮುಖ್ಯವಾಗಿದೆ. ಯುವಪೀಳಿಗೆ, ವಿದ್ಯಾರ್ಥಿಗಳಿಗೆ ಶ್ರೀಗಳ ಸಂದೇಶಗಳು ಸ್ಫೂರ್ತಿಯಾಗಲಿವೆ'' ಎಂದರು. ''ಅವರ ಚಿಂತನೆ, ತತ್ವಗಳನ್ನ ವಿದ್ಯಾರ್ಥಿಗಳ ಸಮುದಾಯಕ್ಕೆ ತಿಳಿಸುವ ಅಗತ್ಯ ಇದೆ. ಸೌಹಾರ್ದ ಸಮಾಜ, ಬಲಿಷ್ಠ ಭಾರತ ನಿರ್ಮಾಣಕ್ಕೆ ಸಂದೇಶಗಳ ಅಗತ್ಯವಿದೆ'' ಎಂದು ತಿಳಿಸಿದರು.

ಸಿದ್ದೇಶ್ವರ ಶ್ರೀಗಳ ಬದುಕಿನ ದಾರಿ:1941ರ ಅಕ್ಟೋಬರ್ 24ರಂದು ಸಿದ್ದೇಶ್ವರ ಸ್ವಾಮೀಜಿ ಜನಿಸಿದ್ದರು. ಸ್ವಗ್ರಾಮ ಬಿಜ್ಜರಗಿಯ ಶಾಲೆಯಲ್ಲಿಯೇ ನಾಲ್ಕನೇ ತರಗತಿವರೆಗೆ ವಿದ್ಯಾಭ್ಯಾಸದ ನಂತರ, ಅವರು ಮಲ್ಲಿಕಾರ್ಜುನ ಸ್ವಾಮೀಜಿ ಬಳಿಗೆ ಬಂದಿದ್ದರು. ಬಾಲ್ಯದಲ್ಲೇ ಸಿದ್ಧೇಶ್ವರನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಯ ಗಮನಕ್ಕೆ ಬಂದಿತ್ತು. ಮಲ್ಲಿಕಾರ್ಜುನ ಸ್ವಾಮೀಜಿ ತಾವು ಪ್ರವಚನ ಮಾಡುವ ಸ್ಥಳಗಳಿಗೆ ಸಿದ್ದೇಶ್ವರರನ್ನು ಕರೆದುಕೊಂಡು ಹೋಗುತ್ತಿದ್ದರು. ಅವರ ಜೊತೆ ಜೊತೆಯಲ್ಲಿಯೇ ಶಾಲಾ - ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಬಳಿಕ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಸ್ನಾತಕೋತ್ತರ (ಎಂಎ) ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಸಿದ್ದೇಶ್ವರ ಸ್ವಾಮೀಜಿ ಪಾಸ್​ ಮಾಡಿದ್ದರು.

ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಅಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ನಡೆಸಿದ್ದರು. ಶ್ರೇಷ್ಠ ಅನುಭಾವಿಗಳೂ, ಮೃದು ಸ್ವಭಾವದವರೂ ಆಗಿದ್ದ ಅವರು, ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳನ್ನೂ ಬಲ್ಲವರಾಗಿದ್ದರು. ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ ಅವರು, ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು - ತನ್ನದೆಂಬ ಮಮಕಾರ ತೊರೆದ ಮಹಾಪುರುಷರು ಆಗಿದ್ದರು. ಇವರು ಸಂತರಷ್ಟೇ ಅಲ್ಲ, ಜ್ಞಾನೋಪಾಸಕರು ಕೂಡ ಆಗಿದ್ದರು. ಸಂತರು ನಾಡಿನಲ್ಲಿ ಅನೇಕರು ಇದ್ದರು. ಆದರೆ, ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಸಿದ್ದೇಶ್ವರ ಸ್ವಾಮೀಜಿ. ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನ ದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮವು ಅವರ ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಪ್ರವರ್ಧಮಾನಕ್ಕೆ ಬಂತು. ಉತ್ತರ ಕರ್ನಾಟಕದ ಜನಮಾನಸದಲ್ಲಿ ಬಹಳವಾಗಿ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ:ಒಕ್ಕಲಿಗ ಕಾರ್ಯಕ್ರಮದಲ್ಲಿ ಆಡಿದ ಒಂದು ಮಾತಿನಿಂದ ಸಿಎಂ ಸ್ಥಾನವನ್ನೇ ಕಳೆದುಕೊಂಡೆ: ಸದಾನಂದಗೌಡ

Last Updated : Dec 27, 2023, 2:37 PM IST

ABOUT THE AUTHOR

...view details