ವಿಜಯಪುರ:ಪೊಲೆಂಡ್ ದೇಶದ ಲುಬ್ಲಿನ್ ತಾಂತ್ರಿಕ ವಿಶ್ವವಿದ್ಯಾಲಯದ ತಂಡ ಶನಿವಾರ ವಿಜಯಪುರದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್‍ರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.
ವಿವಿಯ ಆಟೊಮೇಶನ್ ವಿಭಾಗ ಮುಖ್ಯಸ್ಥ ಪ್ರೊ. ಜಿ.ಲಿಟಕ್, ಮೆಕ್ಯಾನಿಕಲ್ ಇಂಜನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪಿಯೊಟರ್, ಪೊಲೆಂಡ್ ವಿವಿಯ ಅಂತರ್ ರಾಷ್ಟ್ರೀಯ ವ್ಯವಹಾರಗಳ ಕಾರ್ಯದರ್ಶಿ ಬೀಟಾ ಮಿಟುರಾರವರನ್ನು ಒಳಗೊಂಡ ತಂಡ ವಿಜಯಪುರ ಜಿಲ್ಲೆಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆಯಿತು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆ ಇತಿಹಾಸ ಬಗ್ಗೆ ಮಾಹಿತಿ ನೀಡಿದ ಎಂ.ಬಿ.ಪಾಟೀಲ್, ಸಮಾನತೆ ಎನ್ನುವ ಆಚರಣೆಯನ್ನು ಕಲ್ಪಿಸಿಕೊಳ್ಳಲು ಅಸಾಧ್ಯವಾಗಿದ್ದ ಕಾಲದಲ್ಲಿ ಇದೇ ನೆಲದಿಂದ ಹುಟ್ಟಿ ಬಂದ ಬಸವಣ್ಣ ಬಹುದೊಡ್ಡ ಸಾಮಾಜಿಕ ಆಂದೋಲನವನ್ನು ಆರಂಭಿಸುವ ಮೂಲಕ ಶರಣ ಕ್ರಾಂತಿಗೆ ಕಾರಣರಾದರು. ಅವರ ಜನಿಸಿದ ಜಿಲ್ಲೆ ವಿಜಯಪುರ 16ನೇ ಶತಮಾನದಲ್ಲಿ ಇಡೀ ಭಾರತಕ್ಕೆ ಮಾದರಿಯಾಗಿತ್ತು. ರಾಜ್ಯಭಾರವನ್ನು ಮಾಡಿದ್ದ ಆದಿಲ್ ಶಾಹಿ ಅರಸರ ಕೇಂದ್ರ ಸ್ಥಾನ ವಿಜಯಪುರವಾಗಿತ್ತು. ಇಲ್ಲಿ ಪ್ರವಾಸೊದ್ಯಮ, ಕೃಷಿ, ಕೈಗಾರಿಕೆಗೆ ಅತೀ ಹೆಚ್ಚಿನ ಅವಕಾಶಗಳಿದ್ದು, ಅದಕ್ಕೆ ಪೂರಕ ಎಲ್ಲ ವಾತಾರಣವು ಇಲ್ಲಿ ಸೃಷ್ಠಿಯಾಗಿದೆ ಎಂದು ಹೇಳಿದರು.
ಲುಬ್ಲಿನ್ ತಾಂತ್ರಿಕ ವಿವಿ ಬಿ.ಎಲ್.ಡಿ.ಇ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಕಾಲೇಜಿನೊಂದಿಗೆ ಸಂಶೋಧನೆ ಹಾಗೂ ಪ್ರಾಧ್ಯಾಪಕರ ವಿನಿಮಯಕ್ಕೆ, ಬಿ.ಎಲ್.ಡಿ.ಇ ಫಾರ್ಮಸಿ ಕಾಲೇಜಿನೊಂದಿಗೆ ಪರಸ್ಪರ ಔಷಧ ತಂತ್ರಜ್ಞಾನ ವರ್ಗಾವಣೆಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲದೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದೊಂದಿಗೆ ಸಹ ಮಾತುಕತೆಯಾಗಿದ್ದು, ಮುಂದಿನ ದಿನಗಳಲ್ಲಿ ಪರಸ್ಪರ ಒಪ್ಪಂದ ಆಗಲಿದೆ.
ನಂತರದಲ್ಲಿ ಎಂ.ಬಿ.ಪಾಟೀಲ ಸಚಿವರಾಗಿದ್ದ ಕಾಲದಲ್ಲಿ ವಿಜಯಪುರದಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾರ್ಯಗಳಾದ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ಬೆಳೆಸಿದ ಸಸ್ಯೋದ್ಯಾನ, ಭೂತನಾಳ ಕೆರೆಗೆ ನೀರು ತುಂಬಿಸುವ ಯೋಜನೆ ಹಾಗೂ ತಿಡಗುಂದಿ ಅಕ್ವಾಡೆಕ್ಟ್ ವೀಕ್ಷಿಸಿದ ತಂಡ ಈ ಯೋಜನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು.