ವಿಜಯಪುರ :ಟಿಕೆಟ್ ಹಂಚಿಕೆ ಆಗುವ ಮುನ್ನವೇ ವಿಜಯಪುರ ಜಿಲ್ಲಾ ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಹಿರಿಯ ಮುಖಂಡ ಎಸ್.ಅರ್.ಪಾಟೀಲ್, ವರಿಷ್ಠರ ಮೇಲೆ ಒತ್ತಡ ಹಾಕುತ್ತಿರುವ ಬೆನ್ನಲ್ಲಿಯೇ ಈ ಕ್ಷೇತ್ರದಲ್ಲಿ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದ 9 ಮುಖಂಡರು, ಎಸ್.ಆರ್.ಪಾಟೀಲ್ ಹಾಗೂ ಪಕ್ಷದ ವರಿಷ್ಠರ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಡಾ. ಪ್ರಭುಗೌಡ ಪಾಟೀಲ ಲಿಂಗದಳ್ಳಿ, ಇತ್ತೀಚಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಯಾತ್ರೆ ದೇವರ ಹಿಪ್ಪರಗಿಗೆ ಬಂದಿತ್ತು. ಈ ಸಂದರ್ಭದಲ್ಲಿ 9ಜನ ಟಿಕೆಟ್ ಆಕಾಂಕ್ಷಿಗಳ ಪೈಕಿ ಒಬ್ಬರಿಗೆ ಟಿಕೆಟ್ ನೀಡಲಾಗುವುದು. ಉಳಿದವರು ಅವರ ಗೆಲುವಿಗಾಗಿ ಕ್ಷೇತ್ರದಲ್ಲಿ ಶ್ರಮಿಸಬೇಕು ಎಂದು ಭಾಷೆ ತೆಗೆದು ಕೊಂಡಿದ್ದರು. ಅದರಂತೆ 9ಜನ ಟಿಕೆಟ್ ಆಕಾಂಕ್ಷಿಗಳು ಸಹ ಮತದಾರರ ಮೇಲೆ ಆಣೆ ಪ್ರಮಾಣ ಮಾಡಿ ಸಿದ್ದರಾಮಯ್ಯ ಅವರು ಹೇಳಿದಂತೆ ಮಾಡುವದಾಗಿ ಹೇಳಿ ಒಪ್ಪಿಗೆ ಸೂಚಿಸಿದ್ದೆವು. ಅಲ್ಲಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದೇವೆ. ಆದರೆ, ಕಳೆದ ಎರಡ್ಮೂರು ದಿನಗಳಿಂದ ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರ ಹೆಸರು ದೇವರಹಿಪ್ಪರಗಿ ಕ್ಷೇತ್ರ ಟಿಕೆಟ್ ಆಕಾಂಕ್ಷಿ ಪಟ್ಟಿಯಲ್ಲಿ ಓಡಾಡುತ್ತಿದೆ. ಇದು ಸಹಜವಾಗಿ 9 ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ ಉಂಟುಮಾಡಿದೆ. ಎಸ್ ಆರ್ ಪಾಟೀಲ್ ಅವರು ಮೊದಲೇ ಇಚ್ಛೆ ಪಟ್ಟಿದ್ದರೇ ನಾನು ಕೂಡ ಟಿಕೆಟ್ ಆಕಾಂಕ್ಷಿ ಎಂದು ತಿಳಿಸಬಹುದಾಗಿತ್ತು. ತದನಂತರ ಸಮಾಲೇಚನೆ ನಡೆಸಿ ನಾವು ಸಹಾ ಅವರ ಅಪ್ಲಿಕೇಶನ್ ಅನ್ನು ಸ್ವೀಕಾರ ಮಾಡುತ್ತಿದ್ದೆವು ಎಂದು ಹೇಳಿದರು.
ಕಳೆದ ಬಾರಿ ಸೋಲಿಗೆ ಇದೇ ಮಾದರಿ ಮುಳುವು :ಬಳಿಕ ಈ ಕುರಿತು ಮಾತನಾಡಿರುವ ದೇವಹಿಪ್ಪರಗಿ ಮತಕ್ಷೇತ್ರದ ಮತ್ತೊಬ್ಬ ಪ್ರಬಲ ಟಿಕೆಟ್ ಆಕಾಂಕ್ಷಿ ಆನಂದ ದೊಡ್ಡಮನಿ, ಕಳೆದ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಮೊದಲು ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡವರನ್ನು ಬಿಟ್ಟು ಕ್ಷೇತ್ರಕ್ಕೆ ಸಂಬಂಧ ಪಡದ ಅಭ್ಯರ್ಥಿಗೆ ಟಿಕೆಟ್ ನೀಡಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿತ್ತು. ಈ ಬಾರಿಯೂ ಇದೇ ಮಾದರಿಯನ್ಜು ಪಕ್ಷದ ವರಿಷ್ಠರು ಅನುಸರಿಸಿದರೆ ಮತ್ತೆ ಕ್ಷೇತ್ರವನ್ನು ಕಳೆದು ಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.