ಕರ್ನಾಟಕ

karnataka

ETV Bharat / state

ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧ ಶಿವಾನಂದರ ಅಂತ್ಯಕ್ರಿಯೆ.. - ಹುತಾತ್ಮ ಯೋಧ ಶಿವಾನಂದರ ಅಂತ್ಯಕ್ರಿಯೆ

ಮುದ್ದೇಬಿಹಾಳ ಪಟ್ಟಣದಿಂದ ಎಂಜಿವಿಸಿ ಕಾಲೇಜಿನವರೆಗೆ ಬೈಕ್ ರ‍್ಯಾಲಿ ಮೂಲಕ ಯೋಧನ ಪಾರ್ಥೀವ ಶರೀರದ ಮೆರವಣಿಗೆ ನಡೆಸಲಾಯಿತು. ಅಲ್ಲಿಂದ ನೇರವಾಗಿ ಮನೆಗೆ ಪಾರ್ಥೀವ ಶರೀರ ತರಲಾಯಿತು. ಸಾವಿರಾರು ಜನ ಭಾರತ ಮಾತಾಕಿ ಜೈ, ಅಮರ ಹೈ ಅಮರ ಹೈ ಶಿವಾನಂದ ಅಮರ ಹೈ ಎಂಬ ಘೋಷಣೆ ಕೂಗಿದರು..

muddhebihala
ಹುತಾತ್ಮ ಯೋಧ ಶಿವಾನಂದರ ಅಂತ್ಯಕ್ರಿಯೆ

By

Published : Sep 2, 2020, 9:07 PM IST

Updated : Sep 2, 2020, 9:46 PM IST

ಮುದ್ದೇಬಿಹಾಳ :ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಣೆಯ ವೇಳೆ ವಿದ್ಯುತ್ ಅವಘಡದಿಂದ ಹುತಾತ್ಮರಾದ ತಾಲೂಕಿನ ಬಸರಕೋಡ ಗ್ರಾಮದ ಬಿಎಸ್‌ಎಫ್ ಯೋಧ ಶಿವಾನಂದ ಬಡಿಗೇರ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ನಡೆಯಿತು.

ಜಮ್ಮು-ಕಾಶ್ಮೀರದಿಂದ ದೆಹಲಿ, ಬೆಂಗಳೂರಿನವರೆಗೆ ವಿಮಾನದ ಮೂಲಕ ಬೆಂಗಳೂರಿನಿಂದ ಬಿಎಸ್‌ಎಫ್ ಸೇನಾ ವಾಹನದಲ್ಲಿ ತಾಲೂಕಿನ ಗಡಿ ಗ್ರಾಮ ತಂಗಡಗಿ ನೀಲಾಂಬಿಕಾ ದೇವಸ್ಥಾನದ ಬಳಿ ತಹಶೀಲ್ದಾರ್ ಅನಿಲ್‌ಕುಮಾರ್‌ ಢವಳಗಿ, ಸಿಪಿಐ ಆನಂದ ವಾಘಮೋಡೆ ಪಾರ್ಥೀವ ಶರೀರವನ್ನು ಬರಮಾಡಿಕೊಂಡರು. ಅಲ್ಲಿಂದ ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸಿದ ಬಳಿಕ ಬಸವೇಶ್ವರ ವೃತ್ತದಿಂದ ಹಳೇ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಸೈನಿಕ ಮೈದಾನದಲ್ಲಿನ ಕಾರ್ಗಿಲ್ ವೀರ ಯೋಧರ ಸ್ಮಾರಕದವರೆಗೆ ಮೆರವಣಿಗೆ ನಡೆಸಲಾಯಿತು. ಅರ್ಧ ತಾಸಿನವರೆಗೆ ಸಾರ್ವಜನಿಕ ದರ್ಶನಕ್ಕಿಡಲಾಯಿತು.

ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧ ಶಿವಾನಂದರ ಅಂತ್ಯಕ್ರಿಯೆ

ಈ ವೇಳೆ ಮಾತನಾಡಿದ ಕುಂಟೋಜಿ ಚೆನ್ನವೀರ ದೇವರು, ದೇಶದ ಸಲುವಾಗಿ ತಮ್ಮ ಪ್ರಾಣಾರ್ಪಣೆ ಮಾಡಿರುವ ಯೋಧ ಶಿವಾನಂದ ಬಡಿಗೇರ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕೆಂದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಅವರ ಹೆಸರಿನಲ್ಲಿ ಒಂದು ಉದ್ಯಾನವನ, ಸ್ಮಾರಕ ನಿರ್ಮಾಣ ಮಾಡುವ ಕೆಲಸ ಆಗಬೇಕು ಎಂದು ಹೇಳಿದರು.

ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಹುತಾತ್ಮ ಯೋಧ ಶಿವಾನಂದ ಅವರ ಹೆಸರು ಉಳಿಸುವ ಕೆಲಸವನ್ನು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಡಲಾಗುತ್ತದೆ. ಅವರ ಅಗಲಿಕೆ ಇಡೀ ದೇಶಕ್ಕೆ ಆಗಿರುವ ನಷ್ಟ ಎಂದು ಹೇಳಿದರು. ಕಾರ್ಗಿಲ್ ಸ್ಮಾರಕ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಬಸವರಾಜ ನಂದಿಕೇಶ್ವರಮಠ, ಎಪಿಎಂಸಿ ನಿರ್ದೇಶಕ ವೈ ಹೆಚ್ ವಿಜಯಕರ್, ವಿಶ್ವಕರ್ಮ ಸಮಾಜದ ಸೂರ್ಯನಾರಾಯಣ ಸ್ವಾಮೀಜಿ ಮೊದಲಾದವರು ಮಾತನಾಡಿದರು.

ಸಾರ್ವಜನಿಕ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ

ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಸೋಮನಗೌಡ ಪಾಟೀಲ ನಡಹಳ್ಳಿ, ಚಿನ್ನು ನಾಡಗೌಡ, ಪುರಸಭೆ ಸದಸ್ಯೆ ಸಹನಾ ಬಡಿಗೇರ, ಬಸಮ್ಮ ಸಿದ್ದರೆಡ್ಡಿ, ಕಾಶೀಬಾಯಿ ರಾಂಪೂರ ಮೊದಲಾದವರಿದ್ದರು.

ಬಸರಕೋಡದಲ್ಲಿ ಉಕ್ಕಿ ಹರಿದ ಅಭಿಮಾನ, ಆಕ್ರಂದನ :ಮುದ್ದೇಬಿಹಾಳ ಪಟ್ಟಣದಿಂದ ಎಂಜಿವಿಸಿ ಕಾಲೇಜಿನವರೆಗೆ ಬೈಕ್ ರ‍್ಯಾಲಿ ಮೂಲಕ ಯೋಧನ ಪಾರ್ಥೀವ ಶರೀರದ ಮೆರವಣಿಗೆ ನಡೆಸಿ ಬೀಳ್ಕೊಡಲಾಯಿತು. ಅಲ್ಲಿಂದ ನೇರವಾಗಿ ಯೋಧ ಶಿವಾನಂದ ಬಡಿಗೇರ ಅವರ ಮನೆಗೆ ಪಾರ್ಥೀವ ಶರೀರ ಕೊಂಡೊಯ್ಯಲಾಯಿತು. ಈ ವೇಳೆ ನೆರೆದಿದ್ದ ಸಾವಿರಾರು ಮಹಿಳೆಯರು, ಗ್ರಾಮಸ್ಥರು ಭಾರತ ಮಾತಾಕಿ ಜೈ, ಅಮರ ಹೈ ಅಮರ ಹೈ ಶಿವಾನಂದ ಅಮರ ಹೈ ಎಂಬ ಘೋಷಣೆಗಳನ್ನು ಕೂಗಿದರು. ಯೋಧ ಶಿವಾನಂದ ಅವರ ತಾಯಿ ರತ್ನಾಬಾಯಿ, ಪತ್ನಿ ಪುಷ್ಪಾ, ಸಹೋದರರ ಆಕ್ರಂದನ ಮುಗಿಲು ಮುಟ್ಟಿತ್ತು.

ಸರ್ಕಾರಿ ಗೌರವ

ಸಾರ್ವಜನಿಕ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ :ಹುತಾತ್ಮ ಯೋಧ ಶಿವಾನಂದ ಬಡಿಗೇರ ಅವರ ಪಾರ್ಥೀವ ಶರೀರವನ್ನು ಅವರ ನಿವಾಸದಿಂದ ಪವಾಡ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕಿಡಲಾಯಿತು. ಗ್ರಾಮಸ್ಥರೇ ಮುಂದೆ ನಿಂತು ತಾಲೂಕಾಡಳಿತಕ್ಕೆ ಸೂಚಿಸಿ ಅಚ್ಚುಕಟ್ಟಾಗಿ ಬ್ಯಾರಿಕೇಡ್ ಅಳವಡಿಸಿದ್ದರಿಂದ ಯೋಧನ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದುಕೊಳ್ಳಲು ಅನುಕೂಲವಾಯಿತು.

ಸರ್ಕಾರಿ ಗೌರವ :ಸಾರ್ವಜನಿಕ ದರ್ಶನ ಅಂತ್ಯಗೊಳಿಸುತ್ತಲೇ ಮುದ್ದೇಬಿಹಾಳ ರಸ್ತೆಯಲ್ಲಿರುವ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಿರ್ಮಿಸಲಾಗಿದ್ದ ಅಂತ್ಯಸಂಸ್ಕಾರದ ಜಾಗೆಗೆ ಪಾರ್ಥೀವ ಶರೀರರವನ್ನು ಮೆರವಣಿಗೆ ಮೂಲಕ ತರಲಾಯಿತು. ಈ ವೇಳೆ ಜಮ್ಮುವಿನಿಂದ ಪಾರ್ಥೀವ ಶರೀರದೊಂದಿಗೆ ಆಗಮಿಸಿದ್ದ 92 ಬೆಟಾಲಿಯನ್ ಪ್ಲಟೂನ್‌ದ ಪಿಎಸ್‌ಐ ರೆಡ್ಡಿ ನೇತೃತ್ವದಲ್ಲಿ ಬೆಂಗಳೂರಿನ ಬಿಎಸ್‌ಎಫ್ ಯೋಧರು ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವಾರ್ಪಣೆ ಸಲ್ಲಿಸಿದರು.

ಕುಟುಂಬಸ್ಥರ ಆಕ್ರಂದನ

ಬಳಿಕ ಪೊಲೀಸ್ ಇಲಾಖೆಯಿಂದಲೂ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ತಾಪಂ ಉಪಾಧ್ಯಕ್ಷ ಹಾಗೂ ಪಾಟೀಲ್ ಮನೆತನದ ಮುಖಂಡ ಮಂಜುನಾಥಗೌಡ ಪಾಟೀಲ ನಾಡಕೋವಿಯಿಂದ ಒಂದು ಸುತ್ತಿನ ಗುಂಡು ಹಾರಿಸಿ ತಮ್ಮ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಈ.ಶಾಂತವೀರ,ಸಿಪಿಐ ಆನಂದ ವಾಘಮೋಡೆ, ಪಿಎಸ್‌ಐ ಮಲ್ಲಪ್ಪ ಮಡ್ಡಿ, ತಾಳಿಕೋಟಿ ಪಿಎಸ್ಐ ಎಸ್.ಹೆಚ್.ಪವಾರ್ ಮೊದಲಾದವರು ಭದ್ರತಾ ಉಸ್ತುವಾರಿ ವಹಿಸಿದ್ದರು.

Last Updated : Sep 2, 2020, 9:46 PM IST

ABOUT THE AUTHOR

...view details