ಮುದ್ದೇಬಿಹಾಳ: ಜ್ಯಾತ್ಯಾತೀತ ಹಾಗೂ ಪಕ್ಷಾತೀತ ವ್ಯಕ್ತಿಯೊಬ್ಬರನ್ನು ದೇಶ ಕಳೆದುಕೊಂಡಿದೆ ಎಂದು ಬಿಎಸ್‌ಎನ್‌ಎಲ್ ಸಲಹಾ ಸಮಿತಿ ನಾಮನಿರ್ದೇಶಿತ ಸದಸ್ಯ ಸದ್ದಾಂ ಕುಂಟೋಜಿ ಹೇಳಿದರು.
ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿ ಎನ್.ಎಸ್.ಯು.ಐ ಹಾಗೂ ಯುವ ಕಾಂಗ್ರೆಸ್ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲಾ ಪಕ್ಷದವರನ್ನು ಸಮಾನರಾಗಿ ಕಾಣುತ್ತಿದ್ದ ಮುತ್ಸದ್ಧಿ ರಾಜಕಾರಣಿ ಆಗಿದ್ದರು ಎಂದು ಹೇಳಿದರು.
ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ ಮಾತನಾಡಿ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ಪಡೆದಿರುವ ಹಿರಿಯರು, ಮುತ್ಸದ್ಧಿ ರಾಜಕಾರಣಿಗಳಾಗಿದ್ದ ಮಾಜಿ ರಾಷ್ಟ್ರಪತಿ ಅವರ ನಿಧನ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ನೀಡದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರಿಗೆ ಅಪಮಾನಿಸಿದೆ ಎಂದು ಆರೋಪಿಸಿದರು.
ಮುಖರ್ಜಿ ನಿಧನ ಹಿನ್ನೆಲೆಯಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಯುವ ಕಾಂಗ್ರೆಸ್ ತಾಲೂಕಾಧ್ಯಕ್ಷ ಮಹ್ಮದರಫೀಕ ಶಿರೋಳ, ಉಪಾಧ್ಯಕ್ಷ ಮಹ್ಮದಯೂಸುಫ್ ನಾಯ್ಕೋಡಿ, ಪುರಸಭೆ ಸದಸ್ಯರಾದ ಮಹಿಬೂಬ ಗೂಳಸಂಗಿ ಹಾಗೂ ಕಾಂಗ್ರೆಸ್ ಹಾಗೂ ಎನ್.ಎಸ್.ಯು.ಐ ಸಂಘಟನೆಯ ಪದಾಧಿಕಾರಿಗಳು ಇದ್ದರು.