ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾನು ಯೋಗ್ಯನಿರುವುದಾಗಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದ್ದಾರೆ.
ಟವೆಲ್ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಸ್ ಅಥವಾ ರೈಲ್ವೆ ಸೀಟ್ ಅಲ್ಲ: ಯತ್ನಾಳ್ಗೆ ಪಟ್ಟಣಶೆಟ್ಟಿ ಟಾಂಗ್
ಸಾಮಾನ್ಯ ಕಾರ್ಯಕರ್ತರಿಗೂ ಪಕ್ಷ ಅವಕಾಶ ಮಾಡಿಕೊಡಲಿ. ಹೈಕಮಾಂಡ್ ಏನಾದರು ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ರೆ ಸಮರ್ಥವಾಗಿ ನಿಭಾಯಿಸುವೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತರಿಗೂ ಪಕ್ಷ ಅವಕಾಶ ಮಾಡಿಕೊಡಲಿ. ಹೈ ಕಮಾಂಡ್ ಏನಾದರು ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಸ್ವೀಕರಿಸುತ್ತೇನೆ ಎಂದರು. ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಜ್ಯಾದ್ಯಕ್ಷ ಸ್ಥಾನ ನೀಡಿದರೆ ಪಕ್ಷದಲ್ಲಿ ಅದು ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಯಡಿಯೂರಪ್ಪ ನಂತರ ತಾನೇ ಡೈನಾಮಿಕ್ ಲೀಡರ್ ಎನ್ನುತ್ತಿರುವ ಯತ್ನಾಳ್ಗೆ ಪಟ್ಟಣಶೆಟ್ಟಿ ಟಾಂಗ್ ಕೊಟ್ಟರು.
ಪಕ್ಷದಲ್ಲಿ ಯಾರೂ ಡೈನಾಮಿಕ್ ಹೀರೋ ಅನ್ನೋರು ಇಲ್ಲ. ಪಕ್ಷವೇ ನಮಗೆ ಡೈನಾಮಿಕ್, ಪಕ್ಷವೇ ಹೀರೋ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ್ದೇನಿ ಅಂತ ಯತ್ನಾಳ್ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಪಟ್ಟಣಶೆಟ್ಟಿ, ಟವೆಲ್ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಸ್ ಅಥವಾ ರೈಲ್ವೆ ಸೀಟ್ ಅಲ್ಲ. ಪಕ್ಷದ ಸ್ಥಾನವನ್ನು ಯಾರಿಗೆ ಯೋಗ್ಯತೆ ಇರುತ್ತೋ ಅವರಿಗೆ ಸಿಗಲಿದೆ ತಿರುಗೇಟು ನೀಡಿದರು.