ಮುದ್ದೇಬಿಹಾಳ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವೆಂದು ಗುರುವಾರ ತಿರಸ್ಕೃತವಾಗಿದ್ದ ಇಬ್ಬರ ನಾಮಪತ್ರಗಳನ್ನು ಕಲಬುರಗಿ ಉಚ್ಚ ನ್ಯಾಯಾಲಯ ನೀಡಿರುವ ಆದೇಶದಂತೆ ಅಂಗೀಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಸಂತೋಷ ಇಳಕಲ್ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿರುವ ಚುನಾವಣಾಧಿಕಾರಿ ಸಂತೋಷ, ಪಟ್ಟಣದ ಟಿಎಪಿಸಿಎಂಎಸ್‌ಗೆ ನ. 13ರಂದು ಚುನಾವಣೆ ನಡೆಯಲಿದೆ. ನ. 5 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದು, ಅಂದು ಮದ್ಯಾಹ್ನ 2.11ಕ್ಕೆ ಕಲಬುರಗಿ ಉಚ್ಚ ನ್ಯಾಯಾಲಯದ ಪ್ರಿನ್ಸಿಪಲ್ ಗೌರ್ನಮೆಂಟ್ ಅಡ್ವೋಕೇಟ್ ಕಚೇರಿಯ ಅನುರಾಧಾ ದೇಸಾಯಿ ಅವರು ನನ್ನ ದೂರವಾಣಿಗೆ ಕರೆ ಮಾಡಿ ಕೊಣ್ಣೂರಿನ ಶಂಕರಗೌಡ ಹಿಪ್ಪರಗಿ ಹಾಗೂ ಬಸರಕೋಡದ ಮನೋಹರ ಮೇಟಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತ ಚಲಾಯಿಸಲು ಸೂಚಿಸಿದ್ದಾರೆ.
ಅದರ ಆದೇಶದ ಪ್ರತಿಯನ್ನು ನನ್ನ ಇ ಮೇಲ್ ಮೂಲಕ ರವಾನಿಸುವುದಾಗಿ ಸೂಚಿಸಿದರು. ಸದರಿ ಆದೇಶದಂತೆ ನಾಮಪತ್ರ ಸ್ವೀಕರಿಸಲಾಯಿತು. ನಾಮಪತ್ರ ಸಲ್ಲಿಸುವ ಅವಧಿಯು ಮದ್ಯಾಹ್ನ 3 ಗಂಟೆ ಒಳಗಾಗಿ ಸದರಿ ಕಚೇರಿಯಿಂದ ಹಾಗೂ ದೂರುದಾರರಿಂದ ಅಧಿಕೃತ ಆದೇಶ ಸಲ್ಲಿಸಿರುವುದಿಲ್ಲ. ಆದ್ದರಿಂದ ಅವರಿಬ್ಬರ ನಾಮಪತ್ರ ಸ್ವೀಕೃತಗೊಂಡಿರುವುದಿಲ್ಲ ಎಂದು ನೋಟಿಸ್ ಪ್ರಕಟಿಸಲಾಗಿತ್ತು.