ವಿಜಯಪುರ:ನನ್ನ ಮತ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಯ ಹಣವನ್ನ ತಡೆ ಹಿಡಿಯಲಾಗಿದೆ. ಇದರಲ್ಲಿ ಡಿಸಿಎಂ ಕಾರಜೋಳ ಕೈವಾಡವಿದೆ ಎಂದು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಮಗ ನನ್ನ ವಿರುದ್ದ ಚುನಾವಣೆಯಲ್ಲಿ ನಿಂತು ಸೋತಿದ್ದಾರೆ. ಹೀಗಾಗಿ ಕಾರಜೋಳ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದು ನೀವು ಮತಕ್ಷೇತ್ರದ ಜನತೆಗೆ ಮಾಡುತ್ತಿರುವ ಹಿಂಸೆಯಾಗಿದೆ. ದ್ವೇಷದ ರಾಜಕಾರಣ ಮಾಡುವುದನ್ನ ಬಿಜೆಪಿ ಬಿಡಬೇಕು ಎಂದರು. ಇಂದು ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ರಾಮ ರಾಜ್ಯ ಆಗುತ್ತದೆ ಎಂದು ರಾಜ್ಯದ ಜನತೆ ಕನಸು ಕಂಡಿದ್ದರು. ಆದರೆ, ಬಿಜೆಪಿಗರು ಅದನ್ನು ರಾವಣ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
ಎಂ.ಬಿ.ಪಾಟೀಲ್ ನೀರಾವರಿ ಸಚಿವರಾಗಿದ್ದಾಗ ಪಕ್ಷಬೇಧ ಮರೆತು ಜಿಲ್ಲೆಯಲ್ಲಿ ಸಾಕಷ್ಟು ಹಸಿರು ಕ್ರಾಂತಿ ಮಾಡಿದ್ದರು. ಆದರೆ, ಡಿಸಿಎಂ ಗೋವಿಂದ ಕಾರಜೋಳ ಇದೇ ಜಿಲ್ಲೆಯವರು. ಅವರ ಚಿರಂಜೀವಿ ನನ್ನ ವಿರುದ್ದ ನಾಗಠಾಣ ಮತಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿಂತು ಸೋತಿದ್ದಾರೆ. ಆದರೆ, ಈಗ ನಾಗಠಾಣ ಮತಕ್ಷೇತ್ರದ ಕಾಮಗಾರಿಗಳಿಗೆ ತಡೆ ಹಿಡಿಯುವ ಕೆಲಸ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ನಿಮ್ಮ ಮಗನಿಗೂ 40-50 ಸಾವಿರ ಮತವನ್ನು ಕ್ಷೇತ್ರದ ಜನತೆ ಹಾಕಿದ್ದಾರೆ. ನಾಗಠಾಣ ಮತಕ್ಷೇತ್ರದಲ್ಲಿ ಕೇವಲ ಜೆಡಿಎಸ್ನವರಿಲ್ಲ. ಅಭಿವದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದ ಶಾಸಕ ದೇವಾನಂದ ಚವ್ಹಾಣ ಮನವಿ ಮಾಡಿದರು.